ಉತ್ತಮ ಆಡಳಿತದ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳದ್ದೇ ಮೇಲುಗೈ: ಕೇರಳ ಪ್ರಥಮ

Update: 2018-07-22 17:19 GMT

ಬೆಂಗಳೂರು,ಜು.22: ಚಿಂತನ ಚಿಲುಮೆ ಪಬ್ಲಿಕ್ ಅಫೇರ್ಸ್ ಸೆಂಟರ್(ಪಿಎಸಿ) ತನ್ನ ‘ಸಾರ್ವಜನಿಕ ವ್ಯವಹಾರಗಳ ಸೂಚಿ (ಪಿಎಐ) 2018’ನ್ನು ಶನಿವಾರ ಇಲ್ಲಿ ಬಿಡುಗಡೆಗೊಳಿಸಿದ್ದು,ಕೇರಳವು ಸತತ ಮೂರನೇ ವರ್ಷ ದೇಶದಲ್ಲಿಯೇ ಅತ್ಯುತ್ತಮ ಆಡಳಿತವನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ.

 2016ರಿಂದ ಪ್ರತಿ ವರ್ಷ ಬಿಡುಗಡೆಗೊಳ್ಳುತ್ತಿರುವ ಸೂಚಿಯು ಲಭ್ಯ ದತ್ತಾಂಶಗಳ ಆಧಾರದಲ್ಲಿ ರಾಜ್ಯಗಳಲ್ಲಿಯ ಆಡಳಿತ ಸಾಧನೆಯನ್ನು ಪರಿಶೀಲಿಸಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಒದಗಿಸುವ ಅವುಗಳ ಸಾಮರ್ಥ್ಯಗಳ ಮೇಲೆ ಅವುಗಳಿಗೆ ಸ್ಥಾನಗಳನ್ನು ನೀಡುತ್ತದೆ.

1994ರಲ್ಲಿ ಖ್ಯಾತ ಆರ್ಥಿಕ ತಜ್ಞ ದಿ.ಸ್ಯಾಮ್ಯುವೆಲ್ ಪಾಲ್ ಅವರಿಂದ ಸ್ಥಾಪನೆಗೊಂಡ ಪಿಎಸಿಯು ದೇಶದಲ್ಲಿ ಉತ್ತಮ ಆಡಳಿತಕ್ಕಾಗಿ ಬೇಡಿಕೆಗಳ ಕ್ರೋಢೀಕರಣಕ್ಕಾಗಿ ಶ್ರಮಿಸುತ್ತಿದೆ.

ಉತ್ತಮ ಆಡಳಿತವನ್ನು ನೀಡುತ್ತಿರುವ ರಾಜ್ಯಗಳ ಪೈಕಿ ಕೇರಳದ ನಂತರದ ಸ್ಥಾನಗಳಲ್ಲಿ ತಮಿಳುನಾಡು,ತೆಲಂಗಾಣ,ಕರ್ನಾಟಕ ಮತ್ತು ಗುಜರಾತ್‌ಗಳಿವೆ. ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ಗಳು ಈ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿದ್ದು,ಇದು ಈ ರಾಜ್ಯಗಳಲ್ಲಿ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನಗಳನ್ನು ಸೂಚಿಸುತ್ತಿದೆ.

ಎರಡು ಕೋಟಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಅತ್ಯುತ್ತಮ ಆಡಳಿತವನ್ನು ಹೊಂದಿದ್ದು,ನಂತರದ ಸ್ಥಾನಗಳಲ್ಲಿ ಗೋವಾ, ಮಿಝೊರಾಂ, ಸಿಕ್ಕಿಂ ಮತ್ತು ತ್ರಿಪುರಾಗಳಿವೆ. ನಾಗಾಲ್ಯಾಂಡ್,ಮಣಿಪುರ ಮತ್ತು ಮೇಘಾಲಯ ಕೊನೆಯ ಸ್ಥಾನಗಳಲ್ಲಿವೆ.

ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಯುವರಾಷ್ಟ್ರವಾಗಿರುವ ಭಾರತವು ತನ್ನ ಮುಂದಿರುವ ಅಭಿವೃದ್ಧಿ ಸವಾಲುಗಳನ್ನು ಅಧ್ಯಯನ ಮಾಡಿ ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಅಗತ್ಯವಿದೆ ಎಂದು ಪಿಎಸಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಅವರು ವರದಿ ಬಿಡುಗಡೆ ಸಂದರ್ಭದಲ್ಲಿ ನುಡಿದರು.

ಎಲ್ಲ ರಾಜ್ಯಗಳಲ್ಲಿಯ ಅಗತ್ಯ ಮೂಲಸೌಕರ್ಯ,ಮಾನವ ಅಭಿವೃದ್ಧಿಗೆ ಬೆಂಬಲ,ಸಾಮಾಜಿಕ ರಕ್ಷಣೆ,ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಂತಹ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡು ಪಿಎಸಿಯು ಅಧ್ಯಯನವನ್ನು ನಡೆಸಿತ್ತು. ಜನಸಂಖ್ಯೆಯನ್ನು ಆಧರಿಸಿ ರಾಜ್ಯಗಳನ್ನು ದೊಡ್ಡ ಮತ್ತು ಸಣ್ಣ ಹೀಗೆ ಎರಡು ವರ್ಗಗಳಲ್ಲಿ ವಿಂಗಡಿಸಲಾಗಿತ್ತು. ಎರಡು ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯಗಳನ್ನು ದೊಡ್ಡ ರಾಜ್ಯಗಳನ್ನಾಗಿ ಪರಿಗಣಿಸಲಾಗಿತ್ತು.

ಕೇವಲ ಸರಕಾರಿ ದತ್ತಾಂಶಗಳನ್ನು ಅವಲಂಬಿಸಿ ಪಿಎಐ ಅನ್ನು ನಿರ್ಧರಿಸಲು 30 ಮುಖ್ಯ ವಿಷಯಗಳು ಮತ್ತು 100 ಸೂಚಕಗಳನ್ನು ಪರಿಶೀಲಿಸಲಾಗಿತ್ತು.

ಖಾಸಗಿ ದತ್ತಾಂಶ ಮೂಲಗಳನ್ನು ‘ತಾರತಮ್ಯದಿಂದ’ಕೂಡಿದ್ದು ಎಂದು ವ್ಯಾಖ್ಯಾನಿಸಬಹುದಾದ್ದರಿಂದ ತಾನು ಅವುಗಳನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ ಎಂದು ಪಿಎಸಿ ಹೇಳಿದೆ.

ಈ ವರ್ಷದ ಪಿಎಐ ಭಾರತದಲ್ಲಿಯ ಮಕ್ಕಳ ಸುರಕ್ಷತೆ ಕುರಿತು ಪ್ರತ್ಯೇಕ ಸೂಚಿಯನ್ನೂ ಒಳಗೊಂಡಿದ್ದು,ಕೇರಳ,ಹಿಮಾಚಲ ಪ್ರದೇಶ ಮತ್ತು ಮಿರೆರಾಂ ರಾಜ್ಯಗಳು ಅತ್ಯುತ್ತಮ ಬಾಲಸ್ನೇಹಿ ರಾಜ್ಯಗಳಾಗಿ ಹೊರಹೊಮ್ಮಿವೆ.

ಸ್ಯಾಮ್ಯುವೆಲ್ ಪಾಲ್ ಸ್ಮಾರಕ ಉಪನ್ಯಾಸವನ್ನು ನೀಡಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಶಾಂತಾ ಸಿನ್ಹಾ ಅವರು,ದೇಶದಲ್ಲಿ ಮಕ್ಕಳ ಹಕ್ಕುಗಳತ್ತ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News