ಏಶ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಲಕ್ಷ್ಯ ಸೇನ್‌ಗೆ ಸಿಂಗಲ್ಸ್ ಪ್ರಶಸ್ತಿ

Update: 2018-07-22 09:29 GMT

ಜಕಾರ್ತ, ಜು.22: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಏಶ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 16ರ ಹರೆಯದ ಲಕ್ಷ್ಯ ಸೇನ್ ವಿಶ್ವದ ನಂ.1 ಜೂನಿಯರ್ ಆಟಗಾರ ಕುನ್ಲವುಟ್ ವಿಟಿಡರನ್‌ರನ್ನು 21-19, 21-18 ನೇರ ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಗೌತಮ್ ಥಕ್ಕರ್ ಹಾಗೂ ಪಿ.ವಿ.ಸಿಂಧು ಬಳಿಕ ಏಶ್ಯನ್ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೂರನೇ ಆಟಗಾರ ಲಕ್ಷ್ಯ ಸೇನ್.

 ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತ ಇತರ ಶಟ್ಲರ್‌ಗಳೆಂದರೆ: 2009ರಲ್ಲಿ ಪ್ರಣವ್ ಚೋಪ್ರಾ/ಪ್ರಜಕ್ತಾ ಸಾವಂತ್(ಕಂಚು), 2011ರಲ್ಲಿ ಸಮೀರ್ ವರ್ಮ(ಬೆಳ್ಳಿ), ಪಿ.ವಿ.ಸಿಂಧು (ಕಂಚು) ಹಾಗೂ 2012ರಲ್ಲಿ ಸಮೀರ್ ವರ್ಮ ಮತ್ತೊಮ್ಮೆ ಕಂಚು ಜಯಿಸಿದ್ದರು.

1965ರಲ್ಲಿ ಗೌತಮ್ ಥಕ್ಕರ್ ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಮೊದಲ ಪುರುಷ ಆಟಗಾರನಾಗಿದ್ದರು.

ಆರನೇ ಶ್ರೇಯಾಂಕದ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ನಲ್ಲಿ 2ನೇ ಶ್ರೇಯಾಂಕದ ಲಿ ಶಿಫೆಂಗ್‌ರನ್ನು ಸೋಲಿಸಿ ಶಾಕ್ ನೀಡಿದ್ದರು. ಸೆಮಿ ಫೈನಲ್‌ನಲ್ಲಿ ಇಂಡೋನೇಶ್ಯಾದ ನಾಲ್ಕನೇ ಶ್ರೇಯಾಂಕದ ಇಹ್ಸಾನ್ ಲಿಯೊನಾರ್ಡೊ ಇಮ್ಯಾನುಯೆಲ್ ವಿರುದ್ಧ 21-7, 21-14 ಗೇಮ್‌ಗಳಿಂದ ಜಯ ಸಾಧಿಸಿದ್ದರು.

 2016ರಲ್ಲಿ ನಡೆದ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದ ಲಕ್ಷ್ಯ ಸೇನ್ ಇದೀಗ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. 9ನೇ ರ್ಯಾಂಕಿನಲ್ಲಿರುವ ಲಕ್ಷ್ಯ ಥಾಯ್ಲೆಂಡ್‌ನ ನಂ.1 ಆಟಗಾರ ವಿಟಿಡರನ್ ವಿರುದ್ಧ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News