2019ರ ಚುನಾವಣೆಯಲ್ಲಿ ಶಿವಸೇನೆ ಜತೆ ಮೈತ್ರಿಯಿಲ್ಲ: ಅಮಿತ್ ಶಾ

Update: 2018-07-23 08:59 GMT

ಹೊಸದಿಲ್ಲಿ, ಜು. 23: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಿರಾಕರಿಸಿದ ಕೆಲವೇ ದಿನಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿ ಪಕ್ಷವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಯಲ್ಲಿ ಶಿವಸೇನೆ ಜತೆ ಮೈತ್ರಿ ಸಾಧಿಸದು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಮೇಲಿನಂತೆ ಹೇಳಿದ ಶಾ, ರಾಜ್ಯದ ಎಲ್ಲಾ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ 2019ರಲ್ಲಿ ಚುನಾವಣೆ ಎದುರಿಸಲು ಸನ್ನದ್ಧರಾಗುವಂತೆ ಅವರಿಗೆ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಏಕಾಂಗಿ ಹೋರಾಟ ನಡೆಸುವ ಸಲುವಾಗಿ ಅಮಿತ್ ಶಾ ಅವರು 23 ಅಂಶಗಳ ಯೋಜನೆಯ ಬಗ್ಗೆ ಕಾರ್ಯಕರ್ತರ ಜತೆ ಮಾತನಾಡಿದ್ದಾರೆ. ‘ಏಕ್ ಬೂತ್, 25 ಯೂತ್’ ಸೂತ್ರವನ್ನು ಜಾರಿಗೊಳಿಸಲು ಅವರು ಕಾರ್ಯಕರ್ತರಿಗೆ ಸೂಚಿಸಿದ್ದಾರಲ್ಲದೆ ರಾಜ್ಯದಲ್ಲಿ ಎಲ್ಲಾ ಸಾಮಾಜಿಕ ಜಾಲತಾಣ ಗುಂಪುಗಳನ್ನು ಮತ್ತೆ ಸಕ್ರಿಯಗೊಳಿಸುವಂತೆಯೂ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಅಪ್ಪುಗೆಯನ್ನು ಶಿವಸೇನೆ ಕೊಂಡಾಡಿದ ನಂತರದ ಬೆಳವಣಿಗೆ ಇದಾಗಿದೆ. ‘‘ರಾಹುಲ್ ಅವರ ಅಪ್ಪುಗೆ ಮೋದಿಗೆ ಆಘಾತ ತಂದಿದೆ. ಕಾಂಗ್ರೆಸ್ ಅಧ್ಯಕ್ಷರು ನಿಜವಾದ ರಾಜಕೀಯ ಶಾಲೆಯಿಂದ ಪದವಿ ಪಡೆದಿದ್ದಾರೆ. ಬಿಜೆಪಿಗೆ ಇಂತಹುದೇ ಇನ್ನಷ್ಟು ಕಂಪನಗಳನ್ನು ನೀಡಬೇಕು’’ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News