ವಿಮಾನವನ್ನು ಹಠಾತ್ ಇಳಿಸಿದ ನಾಯಿ !

Update: 2018-07-23 11:05 GMT

ಮಾಸ್ಕೋ, ಜು. 23: ಸೈಂಟ್ ಪೀಟರ್ಸ್ ಬರ್ಗ್ ನಿಂದ ತನ್ನ ಪ್ರಯಾಣ ಆರಂಭಿಸಿದ್ದ ಬೋಯಿಂಗ್ 737 ವಿಮಾನವೊಂದು ನಾಯಿಯೊಂದರ ಅವಾಂತರದಿಂದಾಗಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ರವಿವಾರ ತುರ್ತಾಗಿ ಭೂಸ್ಪರ್ಶ ಮಾಡಬೇಕಾದ ಘಟನೆ ನಡೆದಿದೆ.

ವಿಮಾನದ ಲಗೇಜ್ ಕಂಪಾರ್ಟ್ ಮೆಂಟ್ ನ ಬಾಗಿಲನ್ನು ಸಣ್ಣ ನಾಯಿಯೊಂದು ಹೇಗೋ ತೆರೆದಿದ್ದೇ ಈ ತುರ್ತು ಭೂ ಸ್ಪರ್ಶಕ್ಕೆ ಕಾರಣ, ವಿಮಾನ ಭೂಮಿಯಿಂದ ಸುಮಾರು 4,000 ಮೀಟರಿನಷ್ಟು ಮೇಲೆ ಹಾರಾಟ ನಡೆಸುತಿದ್ದಾಗ ಅದರ ಅಲಾರ್ಮ್ ಬಾರಿಸಿತ್ತು. ನಂತರ ವಿಮಾನದ ಪೈಲಟ್ ವಿಮಾನವನ್ನು ಮಾಸ್ಕೋ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದಾಗಲೇ ಸಮಸ್ಯೆಗೆ ಕಾರಣವೇನೆಂದು ತಿಳಿದು ಬಂದಿತ್ತು.

ಲಗೇಜ್ ಕಂಪಾರ್ಟ್ ಮೆಂಟ್ ನಲ್ಲಿದ್ದ ನಾಯಿಯ ಪಂಜರವನ್ನು ಸರಿಯಾಗಿ ಮುಚ್ಚಿರದೇ ಇದ್ದುದರಿಂದ ಅದು ಹೊರ ಬಂದು ಅತ್ತಿತ್ತ ಓಡಾಡಿತ್ತಲ್ಲದೆ ಅದರ ಉಗುರಿನಿಂದ ಪರಚಿದ ಕಾರಣ ಆ ಭಾಗದಲ್ಲಿ ಸ್ವಲ್ಪ ಹಾನಿಯೂ ಸಂಭವಿಸಿ ಬಾಗಿಲು ಕೂಡ ತೆರೆದುಕೊಂಡರೂ ಅದು ಸಂಪೂರ್ಣವಾಗಿ ತೆರೆದುಕೊಳ್ಳಲು ವಿಮಾನದ ಭದ್ರತಾ ವ್ಯವಸ್ಥೆ ಅನುಮತಿಸಿರಲಿಲ್ಲ. ಇದೇ ಕಾರಣದಿಂದ ವಿಮಾನದ ಅಲಾರ್ಮ್ ಹೊಡೆದುಕೊಂಡಿತ್ತು. ಈ ಘಟನೆಯಿಂದ ನಾಯಿಗೆ ಏನೂ ತೊಂದರೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News