ಅಧಿಕಾರ ದಾಹಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು: ಎಎಪಿ ಆರೋಪ
ಬೆಂಗಳೂರು, ಜು.24: ಅಧಿಕಾರ ದಾಹಕ್ಕಾಗಿ ಕೆಲವು ರಾಜಕೀಯ ನಾಯಕರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ ಎಂದು ಆಮ್‌ಆದ್ಮಿ ಪಕ್ಷ ಆರೋಪಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಂಚಾಲಕ ಮೋಹನ ದಾಸರಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಯಾದ ನಂತರ ಸಚಿವ ಸ್ಥಾನ ಸಿಗದಿದ್ದವರು ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ನಾಯಕರು ಪ್ರತ್ಯೇಕ ರಾಜ್ಯದ ಪರವಾಗಿ ಹೋರಾಟಗಳನ್ನು ಸಂಘಟಿಸುತ್ತಿರುವುದು ಸರಿಯಾದುದಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಸಚಿವರು, ಶಾಸಕರು ಸರಕಾರ ರಚನೆಯಾದಾಗಿನಿಂದ ಆರಂಭವಾಗಿ, ಇತ್ತೀಚಿಗೆ ಬಜೆಟ್ ಮಂಡನೆವರೆಗೂ ಪ್ರತ್ಯೇಕ ರಾಜ್ಯದ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಜೆಟ್‌ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷಿಸಿದ್ದಾರೆ ಹಾಗು ಹಳೆ ಮೈಸೂರು ಪ್ರಾಂತ್ಯದ ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಎಂದು ವಿಶ್ಲೇಷಿಸುವ ಮೂಲಕ ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡಿ, ಪ್ರತ್ಯೇಕತೆಯ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಅವರು ತಿಳಿಸಿದರ.
ರೈತರ ಸಾಲ ಮನ್ನಾ ವಿಚಾರದಲ್ಲಿಯೂ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ, ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂದು ಕೂಗಾಡುತ್ತಿದ್ದಾರೆ. ಅನಂತರ ಸಾಲ ಮನ್ನಾದಿಂದ ಒಕ್ಕಲಿಗರಿಗೆ ಹೆಚ್ಚು ಲಾಭವಾಗುತ್ತದೆ ಎಂದು ಅಪಪ್ರಚಾರ ಮಾಡಿದರು. ಇದಕ್ಕೆ ಮಂಡ್ಯ ಮತ್ತು ರಾಮನಗರಕ್ಕೆ ನೂರು ಕೋಟಿಗೂ ಕಡಿಮೆ ಅನುದಾನ ನೀಡಿದ್ದಾರೆ ಎಂಬ ಸಮಜಾಯಿಷಿ ನೀಡಿದರು. ಸಿಎಂ ಕುಮಾರಸ್ವಾಮಿ ಶೇ.65 ರಷ್ಟನ್ನು ಉತ್ತರ ಕರ್ನಾಟಕ ಅಭಿವೃದ್ಧಿಗೆ ಬಳಕೆ ಮಾಡುತ್ತೇವೆ ಎಂದು ಪ್ರತಿಪಕ್ಷದ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದರು.
ಎಲ್ಲ ಬೆಳವಣಿಗಳನ್ನು ಗಮನಿಸಿದರೆ, ತಮ್ಮ ಸ್ವಪ್ರತಿಷ್ಠೆಗಾಗಿ, ಅಧಿಕಾರದ ಆಸೆಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದ್ದು, ಅದಕ್ಕೆ ಪುಷ್ಟಿ ನೀಡಿದಂತೆ ಕಾಣುತ್ತಿದೆ. ಹೀಗಾಗಿ, ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಪಕ್ಷಗಳ ನಾಯಕರು ಕರ್ನಾಟಕ ಏಕೀಕರಣಕ್ಕಾಗಿ ದುಡಿದವರ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳಬೇಕು. ಸ್ವಾರ್ಥ ರಾಜಕಾರಣಕ್ಕಾಗಿ ಜನರನ್ನು ಬಲಿ ನೀಡಲು ಮುಂದಾಗಬಾರದು ಎಂದು ಅವರು ತಿಳಿಸಿದರು.