ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ: ಮುಂದಿನ 2 ತಿಂಗಳಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

Update: 2018-07-24 13:20 GMT

ಬೆಂಗಳೂರು, ಜು.24: ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಮುಂದಿನ ಎರಡು ತಿಂಗಳಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಒಲೆ(ಸ್ಟೌವ್) ಹಾಗೂ ರೆಗ್ಯುಲೇಟರ್‌ಗಳನ್ನು ವಿತರಣೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅನಿಲ ಭಾಗ್ಯ ಯೋಜನೆಯಡಿ ಗುರುತಿಸಲ್ಪಟ್ಟಿರುವ ಬಿಪಿಎಲ್ ಪಡಿತರ ಚೀಟಿ ಹೊಂದಿರುವ 32 ಲಕ್ಷ ಫಲಾನುಭವಿಗಳಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸೌಲಭ್ಯ ಒದಗಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಮಂದಿ ಫಲಾನುಭವಿಗಳಿಗೆ ಅನಿಲ ಭಾಗ್ಯ ಕಿಟ್‌ಗಳನ್ನು ವಿತರಿಸುವ ಗುರಿ ಹೊಂದಿದ್ದು, ಇನ್ನೆರಡು ತಿಂಗಳಲ್ಲಿ ಒಂದು ಲಕ್ಷ ಕಿಟ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಕೇಂದ್ರ ಸರಕಾರವು ಒಪ್ಪಿಗೆ ನೀಡಿದ್ದು, ಈಗಾಗಲೆ ಒಂದು ಲಕ್ಷ ಕಿಟ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಿಸಲು ಸರಕಾರ ಉದ್ದೇಶಿಸಿದೆ. ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ 23 ಲಕ್ಷ ಫಲಾನುಭವಿಗಳನ್ನು ಗುರುತಿಸಿದ್ದು, 9 ಲಕ್ಷ ಫಲಾನುಭಗಳಿಗೆ ಈ ಯೋಜನೆಯಡಿ ಸಿಲಿಂಡರ್‌ಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾರ್ಮಿಕ ಸಚಿವ ವೆಂಕಟರಮಣಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಈ ಹಿಂದಿನಂತೆ 7 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಅಕ್ಕಿ ಕಡಿತದ ವಿಚಾರದಲ್ಲಿ ಮುಖ್ಯಮಂತ್ರಿ ನನ್ನ ಜೊತೆ ಯಾವುದೆ ಚರ್ಚೆ ಮಾಡಿಲ್ಲ. ಆದುದರಿಂದ, ಬಿಪಿಎಲ್ ಪಡಿತರ ಚೀಟಿದಾರರು ಯಾವುದೆ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
-ಝಮೀರ್‌ ಅಹ್ಮದ್‌ ಖಾನ್, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News