ಮಾಧ್ಯಮದವರಿಗೆ ವಿಧಾನಸೌಧ ಪ್ರವೇಶಿಸಲು ನಿರ್ಬಂಧ ಹೇರಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-24 14:34 GMT

ಬೆಂಗಳೂರು, ಜು.24: ವಿಧಾನಸೌಧದಲ್ಲಿ ಇತ್ತೀಚೆಗೆ ದಲ್ಲಾಳಿಗಳ ಕಾಟ ಮಿತಿಮೀರಿದೆ. ಪ್ರತಿನಿತ್ಯ ದಲ್ಲಾಳಿಗಳು ವಿಧಾನಸೌಧಕ್ಕೆ ಬರುತ್ತಿರುವುದು ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ. ಇದರಿಂದ ಸಚಿವರು, ಅಧಿಕಾರಿಗಳು ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲ್ಲಾಳಿಗಳ ಹಾವಳಿ ನಿಯಂತ್ರಿಸಲು ವಿಧಾನಸೌಧವನ್ನು ‘ಅತೀಭದ್ರತಾ ವಲಯ’ವೆಂದು ಘೋಷಿಸಿ, ಅಂತಹವರ ಪ್ರವೇಶಕ್ಕೆ ನಿರ್ಬಂಧ ಹೇರಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಪ್ರಮುಖ ಸಭೆಗಳು ನಡೆಯುವಾಗ ಭದ್ರತೆ ಒದಗಿಸಲು ಅನಾನುಕೂಲವಾಗುತ್ತಿರುವ ವಿಚಾರವನ್ನು ಪೊಲೀಸ್ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದರು. ಅಲ್ಲದೆ, ಕೆಲವರು ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡಲು ಸಮಯವೇ ಸಿಗದಂತೆ ಮಾಡುತ್ತಿದ್ದಾರೆ. ಆದುದರಿಂದ, ವಿಧಾನಸೌಧದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ. ಸಾರ್ವಜನಿಕರು ಪಾಸ್ ಪಡೆದು ವಿಧಾನಸೌಧ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಮಾಧ್ಯಮದವರಿಗೆ ವಿಧಾನಸೌಧ ಪ್ರವೇಶಿಸಲು ನಿರ್ಬಂಧವನ್ನು ಹೇರಿಲ್ಲ. ಆದರೆ, ಮಾಧ್ಯಮ ಪ್ರತಿನಿಧಿಗಳು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲೆಂದರಲ್ಲಿ ಸಚಿವರು ಸಿಕ್ಕಿದಾಗ ಒಬ್ಬೊಬ್ಬರೇ ಬಂದು ಮೈಕ್ ಹಿಡಿದು ಮಾತನಾಡಿಸುತ್ತೀರಾ? ನಾವು ಯಾವುದೋ ಆಲೋಚನೆಯಲ್ಲಿರುತ್ತೇವೆ, ನೀವು ಯಾವುದೋ ಪ್ರಶ್ನೆಗಳನ್ನು ಕೇಳುತ್ತೀರಾ, ಅದಕ್ಕೆಲ್ಲ ನಾವು ಉತ್ತರಿಸಲು ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದರು.

ಮಾಧ್ಯಮದವರು ಸಚಿವರನ್ನು ಹುಡುಕಿಕೊಂಡು ಅವರ ಕೊಠಡಿಗಳಿಗೆ ಹೋಗುವುದು ಬೇಡ. ಸಚಿವರೇ ಮಾಧ್ಯಮದವರ ಬಳಿ ಬಂದು ಮಾತನಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಮಾಧ್ಯಮದವರಿಗಾಗಿ ವಿಧಾನಸೌಧದಲ್ಲಿ ಒಂದು ಸ್ಥಳ ನಿಯೋಜನೆ ಮಾಡಿ, ಸಚಿವರು ಅಲ್ಲೆ ಬಂದು ಸುದ್ದಿಗೋಷ್ಠಿ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಪ್ರಕರಣದ ಹಿಂದಿರುವ ದೊಡ್ಡ ಮಟ್ಟದ ವ್ಯೆಹ ಶೀಘ್ರವೇ ಬೆಳಕಿಗೆ ಬರಲಿದೆ. ಎಲ್ಲ ವಿಚಾರಗಳು ಹಂತ ಹಂತವಾಗಿ ಬಹಿರಂಗಗೊಳ್ಳಲಿವೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ರಾಜ್ಯ ಸರಕಾರವು ಮಾಧ್ಯಮಗಳನ್ನು ವಿಧಾನಸೌಧಕ್ಕೆ ಪ್ರವೇಶಿಸದಂತೆ ಕಟ್ಟಿ ಹಾಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಯಥಾಪ್ರಕಾರ ಮಾಧ್ಯಮದವರಿಗೆ ಕೆಲಸ ಮಾಡಲು ಬಿಡಬೇಕು. ಮಾಧ್ಯಮದವರನ್ನು ನಿರ್ಬಂಧಿಸಿದರೆ ಜನ ಸುಮ್ಮನೆ ಕೂರುವುದಿಲ್ಲ. ನಾವು ಮಾಧ್ಯಮದವರ ಪರವಾಗಿ ನಿಲ್ಲುತ್ತೇವೆ.
-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News