ನಾನು ಸಚಿವ ಸ್ಥಾನದ ಆಕಾಂಕ್ಷಿ: ಬಿ.ಸಿ.ಪಾಟೀಲ್
ಬೆಂಗಳೂರು, ಜು.24: ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಪರಿಗಣಿಸಬೇಕು. ಕೊಟ್ಟರೆ ಸಚಿವ ಸ್ಥಾನ ನೀಡಿ, ಇಲ್ಲದಿದ್ದರೆ ನನಗೆ ಯಾವ ನಿಗಮವೂ ಬೇಡ, ಮಂಡಳಿಯೂ ಬೇಡ ಎಂದು ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಗೆದ್ದಿರುವ ಏಕೈಕ ಲಿಂಗಾಯತ ಶಾಸಕ ನಾನು. ಸಚಿವ ಸ್ಥಾನಕ್ಕಾಗಿ ನಾನು ಆಕಾಂಕ್ಷಿಯಾಗಿದ್ದೇನೆ ಎಂದರು.
ಲಿಂಗಾಯತ ವೀರಶೈವ ಸಾದರ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಆದುದರಿಂದ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನ್ನನ್ನು ಪರಿಗಣಿಸಬೇಕು. ಇಲ್ಲದಿದ್ದರೆ, ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಬಿ.ಸಿ.ಪಾಟೀಲ್ ಆಗ್ರಹಿಸಿದರು.
ಆಷಾಢ ಮಾಸದಲ್ಲಿ ಯಾರೂ ಒಳ್ಳೆ ಕೆಲಸ ಮಾಡುವುದಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಮುಂದೆ ಹೋಗಿದೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದ ಅವರು, ಮಾಜಿ ಸ್ಪೀಕರ್ ಕೋಳಿವಾಡ ಅವರು ವಿಧಾನಸಭೆಯ ಪೀಠೋಪಕರಣಗಳನ್ನ ಖಾಸಗಿ ಮನೆಯಲ್ಲಿ ಇಟ್ಟುಕೊಂಡಿದ್ದಲ್ಲಿ ಅದು ಸರಿಯಲ್ಲ. ಯಾರೇ ತಪ್ಪು ಮಾಡಿದರು ತಪ್ಪೇ. ನನಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರು.