ಬಿಬಿಎಂಪಿಗೆ ಬಾಡಿಗೆ ಬಾಕಿ ವಂಚನೆ: ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪ
Update: 2018-07-24 20:22 IST
ಬೆಂಗಳೂರು, ಜು.24: ಮಾರುಕಟ್ಟೆ ಮಳಿಗೆಗಳಿಂದ ಬಾಡಿಗೆಯಿಂದ ಬಿಬಿಎಂಪಿಗೆ ಬರುತ್ತಿದ್ದ ಆದಾಯದಲ್ಲಿ ಮೋಸವಾಗಿದೆ ಎಂಬ ಆರೋಪ ಕೇಳಿಬಂದಿದ್ದು, 200ಕ್ಕೂ ಹೆಚ್ಚು ಅಂಗಡಿ ಮಾಲಕರು ನಾಲ್ಕೈದು ವರ್ಷಗಳಿಂದ ಬಾಡಿಗೆಯನ್ನೇ ಪಾವತಿಸಿಲ್ಲ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆ ಮಳಿಗೆಗಳ ಬಾಡಿಗೆಯಿಂದ ವಾರ್ಷಿಕವಾಗಿ 32 ಕೋಟಿ ರೂ. ಆದಾಯ ಬರಬೇಕಿತ್ತು. ಆದರೆ ಕೇವಲ 3 ಕೋಟಿ, 58 ಲಕ್ಷ ರೂ. ಮಾತ್ರ ವಸೂಲಿ ಮಾಡಲಾಗಿದೆ. 4-5ವರ್ಷಗಳಿಂದ 90 ಕೋಟಿ, 77 ಲಕ್ಷ ರೂ.ಗಳಷ್ಟು ವಸೂಲಿ ಬಾಕಿ ಇದೆ ಎಂದು ಹೇಳಿದರು.
ದಕ್ಷಿಣ ವಲಯದ ಏಳು ಮಾರುಕಟ್ಟೆಗಳ 200ಕ್ಕೂ ಹೆಚ್ಚು ಅಂಗಡಿ ಮಾಲಕರು ಬಾಡಿಗೆ ಪಾವತಿಸಿಲ್ಲ. ಇನ್ನು 116 ಮಾರುಕಟ್ಟೆಗಳಲ್ಲಿರುವ 5,910 ಮಳಿಗೆಗಳಲ್ಲಿ ಬಹುತೇಕ ಮಳಿಗೆಗಳ ಮಾಲಕರು ಬಾಡಿಗೆ ಪಾವತಿಸಿಲ್ಲ. ಬಿಬಿಎಂಪಿಯ ಆಡಳಿತ ಪಕ್ಷ ಆದಾಯ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದರು.