ಯಶವಂತಪುರ ಠಾಣೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Update: 2018-07-24 15:42 GMT

ಬೆಂಗಳೂರು, ಜು.24: ವೆಂಕಟೇಶ್ವರ ಸ್ವಾಮಿ ಹಣೆಯ ಮೇಲಿನ ಮೂರು ನಾಮದ ಸಂಕೇತವು ಸೆಕ್ಸ್ ಸಂಕೇತ ಎಂದು ವಿವಾದಿತ ಹೇಳಿಕೆ ನೀಡಿದ್ದ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿಯನ್ನು ಬಂಧಿಸಲು ವಿಳಂಬ ಮಾಡಿದ ಯಶವಂತಪುರ ಠಾಣೆ ಪೊಲೀಸರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.

ಹಿಂದು ಧರ್ಮಕ್ಕೆ ಸೇರಿದ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರು ರಸ್ತೆಯಲ್ಲಿ ಒಡಾಡಿಕೊಂಡಿದ್ದರೂ ಏಕೆ ಬಂಧಿಸಲಿಲ್ಲ. ಅನ್ಯ ಧರ್ಮದ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ, ಆಗಲೂ ಹೀಗೆ ಸುಮ್ಮನೆ ಇರುತ್ತಿದ್ದಿರೇ? ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿಯಲ್ಲಿ ಧರ್ಮದ ವಿಚಾರವಾಗಿ ಏನೆಲ್ಲಾ ಆಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೀವಿ, ದೂರು ದಾಖಲಿಸಿಕೊಂಡು ಹಲವು ದಿನ ಕಳೆದರೂ ಆರೋಪಿಯನ್ನು ಇದುವರೆಗೂ ಏಕೆ ಬಂಧಿಸಲಿಲ್ಲ. ಸಂಜೆಯೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಯಶವಂತಪುರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗುವುದು ಎಂದು ಸರಕಾರಿ ವಕೀಲರಿಗೆ ತಾಕೀತು ಮಾಡಿ ಸಂಜೆ 4.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.

ಅದರಂತೆ ಸಂಜೆ 4.30ಕ್ಕೆ ಅರ್ಜಿ ಮತ್ತೆ ವಿಚಾರಣೆಗೆ ಕೈತ್ತಿಕೊಳ್ಳಲಾಯಿತು. ಈ ವೇಳೆ ಸರಕಾರಿ ವಕೀಲರು ವಾದಿಸಿ, ನರಸಿಂಹ ಮೂರ್ತಿಯನ್ನು ಇಂದು ಮಧ್ಯಾಹ್ನ 2.30ಕ್ಕೆ ಬಂಧಿಸಲಾಗಿದೆ ಎಂದು ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿಗಳು, ದೂರಿನಲ್ಲಿ ನರಸಿಂಹ ಮೂರ್ತಿಯನ್ನು ಪೊಲೀಸರು ಬಂಧಿಸಬೇಕು ಎಂದು ಕೋರಲಾಗಿತ್ತು. ಅದರಂತೆ ಪೊಲೀಸರು ನರಸಿಂಹ ಮೂರ್ತಿಯನ್ನು ಬಂಧಿಸಿರುವುದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದರು.

ಪ್ರಕರಣವೇನು: 2018ರ ಎ.24ರಂದು ಖಾಸಗಿ ಟಿ ವಿ ವಾಹಿನಿಯಲ್ಲಿ ನಡೆದ ಚರ್ಚಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಅವರು ವೆಂಕಟೆಶ್ವರ ಸ್ವಾಮಿಯ ಹಣೆಯ ಮೇಲಿನ ನಾಮವು ಸೆಕ್ಸ್ ಸಂಕೇತವಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಅಂದು ರಾತ್ರಿಯೇ ನಗರದ ನಿವಾಸಿ ಬಿ.ಎಂ. ಸುರೇಶ್, ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ನರಸಿಂಹಮೂರ್ತಿ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ದೂರು ದಾಖಲಿಸಿದ್ದರು.

ಮೊದಲಿಗೆ ದೂರು ಸ್ವೀಕರಿಸಲು ನಿರಾಕರಿಸಿದ್ದ ಪೊಲೀಸರು ನಂತರ ದೂರು ದಾಖಲಿಸಿಕೊಂಡಿದ್ದರು. ಆದರೆ, ನರಸಿಂಹಮೂರ್ತಿಯನ್ನು ಬಂಧಿಸಿರಲಿಲ್ಲ. ಇದರಿಂದ ದೂರದಾರರು ನಗರ ಪೊಲೀಸ್ ಆಯುಕ್ತರಿಗೆ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ರಾಜ್ಯಪಾಲರಾಗಿ ಮನವಿ ಪತ್ರ ನೀಡಿ, ನರಸಿಂಹ ಮೂರ್ತಿ ಅವರನ್ನು ಬಂಧಿಸುವಂತೆ ಕೋರಿದ್ದರು. ಇಷ್ಟಾದರೂ ದೂರಿನ ಸಂಬಂಧ ನರಸಿಂಹ ಮೂರ್ತಿಯನ್ನು ಬಂಧಿಸದ ಕಾರಣಕ್ಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರು ದಾಖಲಿಸಿ 45 ದಿನ ಕಳೆದರೂ ನರಸಿಂಹ ಮೂರ್ತಿಯನ್ನು ಪೊಲೀಸರು ಬಂಧಿಸಿರಲಿಲ್ಲ. ಹೀಗಾಗಿ, ಆತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದರು.

ಬಂಧನದ ಬೆನ್ನಲ್ಲೇ ಬಿಡುಗಡೆ: ಬೆಳಗ್ಗಿನ ಕಲಾಪದಲ್ಲಿ ಪೊಲೀಸರಿಗೆ ತರಾಟೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪೊಲೀಸರು ನರಸಿಂಹ ಮೂರ್ತಿಯನ್ನು ಬಂಧಿಸಿ ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ನರಸಿಂಹಮೂರ್ತಿ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು. ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಆದೇಶ ಮಾಡಿದರು ಎಂದು ನರಸಿಂಹ ಮೂರ್ತಿ ಪರ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News