ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಬ್ ಸೌಲಭ್ಯಕ್ಕೆ 20 ಲಕ್ಷ ರೂ.: ಎಚ್.ಡಿ.ಕುಮಾರಸ್ವಾಮಿ

Update: 2018-07-24 15:44 GMT

ಬೆಂಗಳೂರು, ಜು.24: ಎಂಜಿನಿಯರಿಂಗ್ ಕಾಲೇಜು ಲ್ಯಾಬ್ ಸೌಲಭ್ಯಕ್ಕೆ ವಿಶೇಷ ಆದ್ಯತೆ ಕೊಡಲು ತೀರ್ಮಾನಿಸಲಾಗಿದ್ದು, ಪ್ರತಿ ಲ್ಯಾಬ್‌ಗೆ 10ರಿಂದ 20 ಲಕ್ಷ ರೂ.ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಶಿಕ್ಷಣಿಕ ಸಮಸ್ಯೆಗಳ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪದವಿ ಕಾಲೇಜುಗಳಿಗೆ 250 ಕೋಟಿ ರೂ.ಅನುದಾನ ಇಟ್ಟಿದ್ದು, ಸುಮಾರು 150 ಕಾಲೇಜುಗಳ ಅಭಿವೃದ್ಧಿಗೆ ನಬಾರ್ಡ್ ಸೇರಿ ಇತರೆ ಸಂಸ್ಥೆಗಳಿಂದ ಹಣ ಕ್ರೋಡೀಕರಣ ಮಾಡಲಾಗುವುದು. ಹಾಗೂ ಕೆಲವೆಡೆ ಪ್ರಾಥಮಿಕ ಶಾಲೆಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿವೆ. ಇವೆಲ್ಲವುಗಳ ಆಮೂಲಾಗ್ರ ಪರಿಹಾರಕ್ಕೆ ಒಂದು ತಿಂಗಳಲ್ಲಿ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಕೆಲವೊಂದು ಪತ್ರಿಕೆಗಳಲ್ಲಿ ತಪ್ಪುವರದಿಯಾಗಿದೆ. ಇಲಾಖೆಯ ಅಧಿಕಾರಿಗಳು ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಸರಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದಾರೆ. ಚರ್ಚೆ ಸಕಾರಾತ್ಮಕವಾಗಿ ನಡೆದಿದ್ದು, ಸಾಲಮನ್ನಾ ಮಾಡಲು ಬ್ಯಾಂಕುಗಳು ಒಪ್ಪಿವೆ ಎಂದು ಅವರು ಮಾಹಿತಿ ನೀಡಿದರು.

ನಾಲ್ಕು ಕಂತುಗಳಲ್ಲಿ ಸಾಲ ಮನ್ನಾ ಮಾಡಲು ಬ್ಯಾಂಕ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅರ್ಹ ಫಲಾನುಭವಿ ಪಟ್ಟಿ ತಯಾರು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 37 ಸಾವಿರ ಕೋಟಿ ರೂ.ಸಾಲವಿದೆ. ಹಳೆಯ ಸರಕಾರದ 4.500 ಕೋಟಿ ರೂ.ಸಾಲ ಬಾಕಿಯಿದೆ. 9,448 ಕೋಟಿ ಹೊಸದಾಗಿ ಚಾಲ್ತಿ ಸಾಲ ಮನ್ನಾ ಆಗಲಿದೆ. ಒಟ್ಟು 48 ಸಾವಿರ ಕೋಟಿ ಸಾಲ ಮನ್ನಾ ಆಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News