ಮಾಹಿತಿ ಹಕ್ಕಿಗೆ ಸಂಚಕಾರ

Update: 2018-07-25 05:18 GMT

ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಲೋಪದೋಷಗಳನ್ನು ಪ್ರಶ್ನಿಸುವವರನ್ನು ಕಂಡರೆ ಆಗುವುದಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಭಿನ್ನಮತವನ್ನು ಹತ್ತಿಕ್ಕಿಯೇ ಅವರು ರಾಜ್ಯವನ್ನು ಆಳಿದ್ದರು. 2002ರಲ್ಲಿ ನಡೆದ ಒಂದು ಸಮುದಾಯದ ಹತ್ಯಾಕಾಂಡವನ್ನು ಅವರು ಖಂಡಿಸಲಿಲ್ಲ, ಮಾತ್ರವಲ್ಲ ಆವಾಗ ಒಂದು ವಿಧದ ವೌನ ಸಮ್ಮತಿ ನೀಡಿದ್ದರು. ಈ ಹತ್ಯಾಕಾಂಡದಲ್ಲಿ ನಿರಾಶ್ರಿತರಾದವರ ಪರವಾಗಿ ಕೆಲಸ ಮಾಡುತ್ತಿದ್ದ ಮಾನವ ಹಕ್ಕು ಹೋರಾಟಗಾರ್ತಿಯಾದ ತೀಸ್ತಾ ಸೆಟಲ್ವಾಡ್ ಮತ್ತು ಖ್ಯಾತ ಕಲಾವಿದೆ ಮಲ್ಲಿಕಾ ಸಾರಾಭಾಯ್ ಅವರಿಗೆ ಚಿತ್ರಹಿಂಸೆ ನೀಡಿದರು.

ಪ್ರಧಾನಿಯಾದ ನಂತರವೂ ಅವರು ಈ ಚಾಳಿಯನ್ನು ಮುಂದುವರಿಸಿದ್ದಾರೆ. ವಿರೋಧದ ಧ್ವನಿ ಇರಲೇ ಬಾರದೆಂದು ಎಲ್ಲರನ್ನೂ ಹತ್ತಿಕ್ಕುತ್ತಿದ್ದಾರೆ. ಸರಕಾರವನ್ನು ಯಾರೂ ಪ್ರಶ್ನಿಸಬಾರದೆಂದು ಬಯಸುತ್ತಿದ್ದಾರೆ. ಈ ಕಾರಣದಿಂದಲೇ ಅವರು ಸರಕಾರದ ಮಾಹಿತಿ ಯಾರಿಗೂ ಗೊತ್ತಾಗಬಾರದೆಂದು ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿರುವವರೆಗೆ ಅಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸಿದರು. ಪ್ರಧಾನಿಯಾದ ಬಳಿಕ ಲೋಕಪಾಲರ ನೇಮಕವನ್ನು ಮುಂದೂಡುತ್ತಲೇ ಬರುತ್ತಿದ್ದಾರೆ.

ಈ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ನವ ಉದಾರವಾದಿ ಆರ್ಥಿಕ ನೀತಿಯನ್ನು ಪಾಲಿಸಿ ಕೆಲ ಲೋಪಗಳನ್ನು ಮಾಡಿದ್ದೇನೋ ನಿಜ. ಆದರೆ, ಜನಸಾಮಾನ್ಯರಿಗೆ ಬೇಕಾದ ಎಲ್ಲಾ ಮಾಹಿತಿ ಅವರಿಗೆ ಲಭ್ಯವಾಗುವಂತೆ ಮಾಹಿತಿ ಕಾಯ್ದೆಯನ್ನು ಜಾರಿಗೆ ತಂದಿದ್ದರು. 2005ರ ಈ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಜನತೆಗೆ ಕೈಗೆ ಎಂತಹ ಅಸ್ತ್ರವನ್ನು ನೀಡಿತ್ತೆಂದರೆ ಕೇವಲ 10 ರೂ. ನೀಡಿ ರಾಷ್ಟ್ರದ ಯಾವುದೇ ಅಧಿಕಾರ ಕೇಂದ್ರದಿಂದ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಭಾರತೀಯ ನಾಗರಿಕರಿಗೆ ನೀಡಿದೆ. ಈ ಮಾಹಿತಿ ಹಕ್ಕು ಕಾಯ್ದೆಯನ್ನೇ ಬಳಸಿಕೊಂಡು ಕೆಲವರು ಮಾಹಿತಿಯನ್ನು ಪಡೆದು ಹಿಂದಿನ ಸರಕಾರದ ಅನೇಕ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆ ತಂದರು. 2ಜಿಯಂತಹ ಹಗರಣಗಳು ಬೆಳಕಿಗೆ ಬಂದವು. ಅದರ ಪರಿಣಾಮವಾಗಿ ರಾಜಾರಂತಹ ಕೇಂದ್ರ ಸಚಿವರು ರಾಜೀನಾಮೆ ನೀಡಿ ಜೈಲಿಗೆ ಹೋಗಬೇಕಾಯಿತು. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದ ಪಂಚಾಯತ್ ಮಟ್ಟದಲ್ಲೂ ಜನಸಾಮಾನ್ಯರು 10 ರೂ. ನೀಡಿ ಅರ್ಜಿ ಸಲ್ಲಿಸಿ ಸರಕಾರದ ಯಾವುದೇ ಅಧಿಕಾರಿಯಿಂದ ತಮಗೆ ಬೇಕಾದ ಮಾಹಿತಿಯನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಪಡೆಯಲು ಈ ಕಾನೂನು ಅವಕಾಶ ನೀಡಿದೆ.

ನವ ಉದಾರೀಕರಣದ ಈ ಕಾಲದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜನಸಾಮಾನ್ಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇರುವ ಅಸ್ತ್ರವಾಗಿತ್ತು. ಇಂತಹ ಮಹತ್ವದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಮೋದಿ ಸರಕಾರ ಮುಂದಾಗಿದೆ. ಈ ಕುರಿತು ಮಸೂದೆ ಜುಲೈ 19ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಾಗಿತ್ತು. ಆದರೆ, ಅದನ್ನು ಈಗ ಮುಂದೂಡಲಾಗಿದೆ. ಇದೇ ಅಧಿವೇಶನದಲ್ಲಿ ಮತ್ತೆ ಅದನ್ನು ತಂದು ಹಲ್ಲು ಕಿತ್ತ ಹಾವನ್ನಾಗಿ ಮಾಡಲು ಮೋದಿ ಸರಕಾರ ಯತ್ನ ನಡೆಸಿದೆ. ಈ ಬಾರಿ ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಪಾಸಾದರೆ ಜನತೆ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಜನತೆಯ ಕೈಯಲ್ಲಿರುವ ಈ ಅಸ್ತ್ರವನ್ನು ಕಿತ್ತುಕೊಳ್ಳುತ್ತಿರುವ ಬಗ್ಗೆ ಪ್ರತಿಪಕ್ಷಗಳು ಹಾಗೂ ಮಾಹಿತಿ ಹಕ್ಕು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಸರಕಾರ ಮಾಹಿತಿ ಆಯುಕ್ತರ ಸೇವಾ ವ್ಯವಸ್ಥೆ ಮತ್ತು ಸಂಬಳದ ಬಗ್ಗೆ ಸುಧಾರಣೆ ತರಲು ಮಾತ್ರ ಈ ತಿದ್ದುಪಡಿ ತರುವುದಾಗಿ ನೆಪ ಹೇಳುತಿದೆ. ಆದರೆ, ಈ ತಿದ್ದುಪಡಿ ಮಸೂದೆ ಜಾರಿಯಾದಲ್ಲಿ ಸರಕಾರದ ಹಸ್ತಕ್ಷೇಪಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಆತಂಕದಲ್ಲಿ ಸಂಶಯವಿಲ್ಲ.

ದೇಶವ್ಯಾಪಿಯಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಮಾಹಿತಿ ಹಕ್ಕು ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದರು. ಇದರಿಂದಾಗಿ ನೂರಾರು ಕೋಟಿ ರೂ. ಹಗರಣಗಳು ಬೆಳಕಿಗೆ ಬಂದವು ಹಾಗೂ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ಸಮಾಜವಿರೋಧಿ ಶಕ್ತಿಗಳಿಂದ ಕೊಲೆಗೀಡಾದರು. ಈಗಲೂ ದೇಶದಲ್ಲಿ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ಜೀವಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಂದು ಜನತೆಯ ಕೈಯಲ್ಲಿರುವ ಒಂದು ಅಸ್ತ್ರವನ್ನು ಕಿತ್ತುಕೊಳ್ಳಲು ಮೋದಿ ಸರಕಾರ ಹೊರಟಿರುವುದು ಖಂಡನೀಯವಾಗಿದೆ.

ಪ್ರಧಾನಿಯಾದ ಬಳಿಕ ತಾನೂ ತಿನ್ನುವುದಿಲ್ಲ ಇನ್ನೊಬ್ಬರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಲೇ ಅವರು ನಾಲ್ಕು ವರ್ಷ ಅಧಿಕಾರ ನಡೆಸಿದ್ದರೂ ಜನತೆಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ನೂರಾರು ಕೋಟಿ ರೂ. ಮೊತ್ತದ ವ್ಯಾಪಂ ಹಗರಣ ಬೆಳಕಿಗೆ ಬಂತು. ಈ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಯತ್ನಿಸಿದ ಅನೇಕ ಮಾಹಿತಿ ಹಕ್ಕು ಹೋರಾಟಗಾರರು ಸಂಶಯಾಸ್ಪದ ಸಾವಿಗೀಡಾದರು. ಆದರೂ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ರಕ್ಷಿಸುತ್ತಾ ಬಂದರು. ಈಗ ತಮ್ಮ ಅಧಿಕಾರ ಕೇವಲ ಒಂದು ವರ್ಷ ಬಾಕಿ ಉಳಿದಿರುವಾಗ ಲೋಕಪಾಲರ ನೇಮಕಕ್ಕೆ ಕಾಟಾಚಾರದ ಸಭೆಯನ್ನು ಕರೆಯುತ್ತಿದ್ದಾರೆ. ಆದರೆ, ಲೋಕಸಭೆಯ ಪ್ರತಿಪಕ್ಷ ನಾಯಕರಿಗೆ ಲೋಕಪಾಲರ ನೇಮಕಾತಿ ಸಮಿತಿಯಲ್ಲಿ ಮುಖ್ಯ ಸ್ಥಾನಮಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲರ ನೇಮಕ ಕುರಿತ ಸಭೆಯಲ್ಲಿ ಭಾಗವಹಿಸಿಲ್ಲ. ಯಾಕೆಂದರೆ ಅವರನ್ನು ಬರೀ ವಿಶೇಷ ಆಹ್ವಾನಿತರನ್ನಾಗಿ ಮಾಡಲಾಗಿದೆ. ವಿಶೇಷ ಆಹ್ವಾನಿತರಿಗೆ ಸಲಹೆ ನೀಡುವ ಯಾವ ಅಧಿಕಾರವೂ ಇರುವುದಿಲ್ಲ. ಲೋಕಪಾಲ ನೇಮಕದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಇನ್ನೊಂದೆಡೆ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬರಬಾರದೆಂಬ ಕಾರಣಕ್ಕೆ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಕೂಡಾ ಜನರಲ್ಲಿ ಸಂದೇಹಕ್ಕೆ ಕಾರಣವಾಗಿದೆ. ಮೋದಿ ಅಧಿಕಾರಕ್ಕೆ ಬಂದ ಆನಂತರ ನೀರವ್ ಮೋದಿ ಅವರಂತಹವರು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ದೋಚಿ ವಿದೇಶಕ್ಕೆ ಪಲಾಯನ ಮಾಡಿದರು. ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮೇಲಿರುವ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಮೂರ್ತಿ ಲೋಯಾ ಸಂಶಯಾಸ್ಪದವಾಗಿ ಸಾವಿಗೀಡಾದರು. ಇವರ ಸಾವಿನ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ.

ಇಂತಹ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾಯ್ದೆಯಂತಹ ಮಹತ್ವದ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಸರಿಯಲ್ಲ. ಹಿಂದಿನ ಮನಮೋಹನ್ ಸಿಂಗ್ ಸರಕಾರ ತಂದ ಮಾಹಿತಿ ಹಕ್ಕು ಕಾಯ್ದೆ ಎಷ್ಟು ಪಾರದರ್ಶಕವಾಗಿತ್ತೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತನಗೆ ಬೇಕಾದ ಮಾಹಿತಿಯನ್ನು ಒಂದು ಅರ್ಜಿ ಹಾಕಿ ಸರಕಾರದಿಂದ ಪಡೆಯಬಹುದಾಗಿತ್ತು. ಆದರೆ, ಈಗ ತರಲಿರುವ ತಿದ್ದುಪಡಿ ಪ್ರಕಾರ ಆರ್‌ಟಿಐಗೆ ಅರ್ಜಿ ಹಾಕುವ ವ್ಯಕ್ತಿ ನಿಧನ ಹೊಂದಿದರೆ ಆ ಪ್ರಕರಣವನ್ನು ಕೈಬಿಡಬೇಕೆಂಬ ಅಂಶ ಅಡಕವಾಗಿದೆ. ಈ ಬಾರಿ ಸಂಸತ್ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದರೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದೆ ಮುಚ್ಚಿಡಲಾಗಿದೆ. ತಿದ್ದುಪಡಿಯಲ್ಲಿರುವ ಅಂಶಗಳನ್ನು ಬಹಿರಂಗಪಡಿಸಬೇಕೆಂದು ಪ್ರತಿಪಕ್ಷಗಳು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಮೇಲ್ನೋಟಕ್ಕೆ ಇದು ಮಾಹಿತಿ ಹಕ್ಕು ಆಯುಕ್ತರ ಸಂಬಳ ನೀಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೀಡುವ ತಿದ್ದುಪಡಿ ಎಂದು ಹೇಳುತ್ತಿದ್ದರೂ ಇದರಲ್ಲಿ ಇವಿಷ್ಟೇ ಅಡಕವಾಗಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ. ಜಗತ್ತಿನಲ್ಲೇ ವ್ಯಾಪಕವಾದ ಮತ್ತು ಪಾರದರ್ಶಕಕ್ಕೆೆ ಹೆಸರಾದ ಈ ಮಾಹಿತಿ ಹಕ್ಕು ಕಾಯ್ದೆಗೆ ಯಾವುದೇ ತಿದ್ದುಪಡಿಯನ್ನು ತರದೆ ಮೂಲಸ್ವರೂಪದಲ್ಲೇ ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಜನಪರ ಸಂಘಟನೆಗಳು ಸರಕಾರದ ಮೇಲೆ ಒತ್ತಡ ತರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News