ಪೋಸ್ಟರ್ ಮುಕ್ತ ನಗರಕ್ಕೆ 'ಆಂಧ್ರದ ಪ್ಯಾರಿಸ್'ನಲ್ಲಿ ಚಿತ್ರಕ್ರಾಂತಿ

Update: 2018-07-25 04:25 GMT

ಗುಂಟೂರು, ಜು. 25: ತೆನಾಲಿ ರಾಮನಿಂದಾಗಿ ದೇಶಾದ್ಯಂತ ಚಿರಪರಿಚಿತವಾಗಿರುವ ತೆನಾಲಿ ಪಟ್ಟಣ ಇದೀಗ ಚಿತ್ರಕ್ರಾಂತಿಯ ಮೂಲಕ ಸುದ್ದಿ ಮಾಡಿದೆ. ಆಂಧ್ರದ ಪ್ಯಾರಿಸ್ ಎಂದೇ ಕರೆಸಿಕೊಳ್ಳುವ ಈ ಪುಟ್ಟ ಸಾಂಸ್ಕೃತಿಕ- ಕಲಾನಗರಿಯನ್ನು ಪೋಸ್ಟರ್ ಮುಕ್ತಗೊಳಿಸುವ ಸಲುವಾಗಿ ಸ್ಥಳೀಯಾಡಳಿತ ಕಲಾವಿದರು ಹಾಗೂ ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ನಗರದ ಗೋಡೆಗಳ ಮೇಲೆ ಇನ್ನು ಪೋಸ್ಟರ್‌ಗಳ ಬದಲು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಬಣ್ಣದ ಚಿತ್ತಾರಗಳು ಮೂಡಲಿವೆ. ಅನಧಿಕೃತ ಹೋರ್ಡಿಂಗ್ ಮತ್ತು ಬ್ಯಾನರ್ ತೆರವುಗೊಳಿಸಲೂ ಸ್ಥಳೀಯ ಸಂಸ್ಥೆ ಮುಂದಾಗಿದೆ.

ನಗರದ ಗೋಡೆಗಳಲ್ಲಿ ಆಕರ್ಷಕ ಚಿತ್ರಗಳು ಮತ್ತು ಗಾಂಧೀಜಿ, ಸ್ವಾಮಿ ವಿವೇಕಾನಂದ ಮುಂತಾದ ಗಣ್ಯರ ನುಡಿಮುತ್ತುಗಳನ್ನು ಬಿಂಬಿಸಲಾಗುತ್ತದೆ. ಸರ್ಕಾರಿ ಕಚೇರಿ ಗೋಡೆ, ನಾಲೆಯ ಗೋಡೆ, ಫ್ಲೈಓವರ್‌ಗಳ ಗೋಡೆಗಳಲ್ಲಿ ಈಗ ಆಕರ್ಷಕ ಚಿತ್ರಗಳು ಕಂಗೊಳಿಸುತ್ತಿದ್ದು, ಬೋಸ್ ರಸ್ತೆ, ವಿಎಸ್‌ಆರ್ ಮತ್ತು ಎನ್‌ವಿಆರ್ ಕಾಲೇಜು ರಸ್ತೆಗಳು ಬಯಲು ಗ್ಯಾಲರಿಗಳಾಗಿ ಕಂಗೊಳಿಸುತ್ತಿವೆ. ಇಡೀ ನಗರವನ್ನು ಚಿತ್ರಗ್ಯಾಲರಿಯಾಗಿ ರೂಪಿಸಲು ಹಲವಾರು ಮಂದಿ ಖ್ಯಾತ ಕಲಾವಿದರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕಲ್ಪವೃಕ್ಷ ಎಂಬ ಸ್ವಯಂಸೇವಾ ಸಂಸ್ಥೆ ಈ ಹೊಣೆ ಹೊತ್ತಿದೆ.

"ನಾವು ಕೈಗೊಂಡ ಈ ಕಾರ್ಯಕ್ಕೆ ಜನರಿಂದ ಧನಾತ್ಮಕ ಸ್ಪಂದನೆಯೂ ದೊರಕಿದೆ" ಎಂದು ಕಲ್ಪವೃಕ್ಷ ಕಾರ್ಯಕರ್ತ ಅಮನ್ ಜೈನ್ ಹೇಳುತ್ತಾರೆ. ನಗರದ ಶಾಲಾ ಕಾಲೇಜುಗಳಲ್ಲಿ ಈ ಅಭಿಯಾನದ ಅಂಗವಾಗಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ.

ಅನಧಿಕೃತ ಪೋಸ್ಟರ್, ಹೋರ್ಡಿಂಗ್ ಅಥವಾ ಬ್ಯಾನರ್ ಹಾಕುವವರ ವಿರುದ್ಧ ಕಾನೂನು ಕ್ರಮಕ್ಕೂ ನಗರಾಡಳಿತ ಮುಂದಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೂಚನೆ ಮೇರೆಗೆ ಸ್ಥಳೀಯ ಸಂಸ್ಥೆ ನಗರ ಸೌಂದರ್ಯ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವನಂ ಮನಂ ಯೋಜನೆಯಡಿ ನಗರದ ಹಸಿರೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಮುಖ್ಯಸ್ಥೆ ಕೆ. ಶಕುಂತಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News