2015ರ ಹಿಂಸಾಚಾರ: ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು

Update: 2018-07-25 17:28 GMT

ಅಹ್ಮದಾಬಾದ್, ಜು. 25: ವಿಸ್ನಗರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪಾಟಿದಾರ್ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿದೆ. 2015ರ ಪಾಟಿದಾರ್ ಪ್ರತಿಭಟನೆ ಸಂದರ್ಭ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ವಿಸ್ನಗರ್‌ನಲ್ಲಿರುವ ಕಚೇರಿಯಲ್ಲಿ ದಾಂಧಲೆ ನಡೆಸಿರುವುದಕ್ಕೆ ಸಂಬಂಧಿಸಿ ನ್ಯಾಯಾಲಯ ಹಾರ್ದಿಕ್ ಪಟೇಲ್ ಅವರಿಗೆ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ವಿಸ್ನಗರ್‌ದ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿ.ಪಿ. ಅಗರ್‌ವಾಲ್, ಗಲಭೆ ನಡೆಸಿರುವುದು, ಬೆಂಕಿ ಹಚ್ಚಿರುವುದು, ಸೊತ್ತುಗಳಿಗೆ ಹಾನಿ ಉಂಟು ಮಾಡಿರುವುದು ಹಾಗೂ ಕಾನೂನು ಬಾಹಿರವಾಗಿ ಗುಂಪು ಸೇರಿರುವುದಕ್ಕೆ ಸಂಬಂಧಿಸಿ ಐಪಿಸಿ ವಿಧಿ ಅಡಿ ಹಾರ್ದಿಕ್ ಅವರ ಇಬ್ಬರು ಸಹವರ್ತಿಗಳನ್ನು ಕೂಡ ದೋಷಿಗಳು ಎಂದು ಪರಿಗಣಿಸಿದ್ದಾರೆ ಹಾಗೂ ಹಾರ್ದಿಕ್ ಅವರಿಗೆ ನೀಡಿದ ಶಿಕ್ಷೆ ಹಾಗೂ ದಂಡವನ್ನು ಅವರಿಗೂ ವಿಧಿಸಿದ್ದಾರೆ.

 ಪಾಟೀದಾರ್ ಮೀಸಲಾತಿ ಚಳವಳಿಯ ಪ್ರಮುಖರಲ್ಲಿ ಒಬ್ಬರಾಗಿದ್ದ ಹಾರ್ದಿಕ್ ಪಟೇಲ್ 2015ರಲ್ಲಿ ನಡೆದ ಗುಜರಾತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಾಟಿದಾರ್ ಸಮುದಾಯ ಮೀಸಲಾತಿ ಆಗ್ರಹಿಸಿ ವಿಸ್ನಗರ್‌ನಲ್ಲಿ ನಡೆದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಇದರ ಪರಿಣಾಮ ಸೊತ್ತುಗಳಿಗೆ ಹಾನಿ ಉಂಟಾಗಿತ್ತು. ಕೆಲವು ಮಾದ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಗುಂಪೊಂದು ಕಾರಿಗೆ ಬೆಂಕಿ ಹಚ್ಚಿತ್ತು ಹಾಗೂ ಸ್ಥಳೀಯ ಶಾಸಕ ಋಷಿಕೇಶ್ ಪಟೇಲ್ ಅವರ ಕಚೇರಿಯಲ್ಲಿ ದಾಂಧಲೆ ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಿ 2015 ಜುಲೈ 23ರಂದು ಮೆಹ್ಸಾನ ಜಿಲ್ಲೆಯ ವಿಸ್ನಗರ್‌ನ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಿಸ್ನಗರದ ಸತ್ರ ನ್ಯಾಯಾಲಯ ಹಾರ್ದಿಕ್ ಹಾಗೂ ಲಾಲ್‌ಜಿ ಅವರಿಗೆ ಬಂಧನಾದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News