ಬಿಜೆಪಿಯಿಂದ ದ್ವೇಷದ ರಾಜಕೀಯ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು, ಜು. 25: ‘ಬಿಜೆಪಿಯವರು ಭಾವನಾತ್ಮಕ ವಿಷಯಗಳ ಮೇಲೆ ಜನರ ಭಾವನೆ ಕೆರಳಿಸುತ್ತಿದ್ದು, ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಸಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಯಾರೂ ಇಂತಹ ದ್ವೇಷದ ರಾಜಕಾರಣ ಮಾಡಿರಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷದ ನಾಯಕರ ಮೇಲೆ ಐಟಿ ದಾಳಿ ನಡೆಸಿ ಬೆದರಿಕೆ ಹಾಕುತ್ತಿದ್ದಾರೆ. ಮಾತ್ರವಲ್ಲ, ಮಾಧ್ಯಮಗಳಿಗೂ ಭಯ ಹುಟ್ಟಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.
ವಿದೇಶ ಸುತ್ತುವುದು ಮತ್ತು ಮನ್ ಕೀ ಬಾತ್ ಪ್ರಧಾನಿ ಮೋದಿಯವರ ದೊಡ್ಡ ಸಾಧನೆಯಾಗಿದೆ ಎಂದ ಅವರು, ಬಿಜೆಪಿಯ ಅನೇಕ ನಾಯಕರು ಪ್ರಧಾನಿ ಮೋದಿ, ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ನಡವಳಿಕೆಯಿಂದ ಬೇಸರಗೊಂಡಿದ್ದಾರೆ ಎಂದು ಟೀಕಿಸಿದರು.
ವಿಪಕ್ಷ ಮುಗಿಸುವ ಉದ್ದೇಶವಿಲ್ಲ: ಪ್ರಧಾನಿ ಆಗುವ ಅವಕಾಶ ಸೋನಿಯಾ ಗಾಂಧಿ ಅವರಿಗಿತ್ತು. ಆದರೆ, ಮನಮೋಹನ್ ಸಿಂಗ್‌ಗೆ ಬಿಟ್ಟುಕೊಟ್ಟಿದ್ದರು. ಆದರೂ ವಿಪಕ್ಷಗಳು ಗಾಂಧಿ ಕುಟುಂಬದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಕುಟುಂಬ ಕಾರಾಗೃಹದಲ್ಲಿತ್ತು. ಅವರ ಕುಟುಂಬ ದೇಶಕ್ಕಾಗಿ ಸೇವೆ ಮಾಡಿದೆ. ದೇಶದ ಐಕ್ಯತೆಯನ್ನೇ ರಾಹುಲ್ ಬಯಸಿದ್ದಾರೆ. ಪ್ರಧಾನಿಯಾಗಬೇಕು, ವಿಪಕ್ಷ ಮುಗಿಸಬೇಕು ಅನ್ನೋ ಉದ್ದೇಶ ಅವರಿಗಿಲ್ಲ. ಹೀಗಾಗಿಯೇ ಹಾಗೆ ಹೇಳಿರಬಹುದು ಎಂದು ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿದರು.
‘ಆಷಾಡ ಮುಗಿದ ಬಳಿಕ ಸರಕಾರ ಪತನ’ ಎಂಬ ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಮೈತ್ರಿ ಸರಕಾರ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಚುನಾವಣೆ ನಂತರ ಜನ ಉತ್ತಮ ಸರಕಾರ ಬಯಸಿದ್ದಾರೆ. ಸರಕಾರ ಪತನ ಮಾಡುವ ಉದ್ದೇಶ ಬಿಎಸ್‌ವೈ ಅವರದಿರಬಹುದು. ಹೀಗಾಗಿ ಅವರು ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಮೈತ್ರಿಗೆ ಬದ್ಧ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಬಗ್ಗೆ ವರಿಷ್ಠರು ತೀರ್ಮಾನಿಸಿದ್ದು, ಅದಕ್ಕೆ ಇಬ್ಬರೂ ಬದ್ಧರಾಗಿರಬೇಕು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಅವರು ಬೆಂಬಲ ನೀಡಬೇಕು. ಅವರು ಸ್ಪರ್ಧಿಸಿದ ಕಡೆಯಲ್ಲಿ ಕಾಂಗ್ರೆಸ್ ಕೂಡ ಬೆಂಬಲ ನೀಡಬೇಕು. ಇದು ಮೈತ್ರಿ ಧರ್ಮ, ಬಿಜೆಪಿ ದೂರವಿಡಲು ಇದು ಅನಿವಾರ್ಯ ಎಂದು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರನ್ನು ಎದುರಿಸುವ ಶಕ್ತಿ ಇರುವುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾತ್ರ. ಆದರೂ, ಬಿಜೆಪಿಯವರು ಅವರನ್ನು ಗೇಲಿ ಮಾಡುವ ವಿಫಲಯತ್ನ ನಡೆಸಿದ್ದಾರೆ’
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ