ಭ್ರಷ್ಟಾಚಾರದ ಪರಾಕಾಷ್ಠೆ ತಲುಪಿದ ಮೋದಿ ಸರಕಾರ: ದಿನೇಶ್ ಗುಂಡೂರಾವ್
ಬೆಂಗಳೂರು, ಜು.26: ರಾಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಯುಪಿಎ ಸರಕಾರದ ಅವಧಿಯಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಬದಲಾಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಭ್ರಷ್ಟಾಚಾರದ ಪರಾಕಾಷ್ಠೆ ತಲುಪಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ದೇಶದ ಅರ್ಥವ್ಯವಸ್ಥೆಯನ್ನು ನಾಶ ಮಾಡಿದಲ್ಲದೆ, ಸ್ವಾತಂತ್ರ ಬಂದಾಗಿನಿಂದಲೂ ಭಾರತವು ಅನುಸರಿಸಿಕೊಂಡು ಬರುತ್ತಿದ್ದ ವಿದೇಶಾಂಗ ನೀತಿಯನ್ನು ಬದಲಾಯಿಸಿದೆ ಎಂದರು.
ಸಮಾಜದಲ್ಲಿ ದ್ವೇಷವನ್ನು ಬಿತ್ತಿ, ತಮ್ಮ ಸ್ನೇಹಿತರಿಗೋಸ್ಕರ ದೇಶದ ರಕ್ಷಣಾ ಹಿತಾಸಕ್ತಿಯನ್ನು ಮಾರಿದ್ದಾರೆ. ಯುದ್ಧ ವಿಮಾನಗಳ ತಯಾರಿಕೆಗೆ ಅಗತ್ಯವಿರುವ ತಂತ್ರಜ್ಞಾನ ವರ್ಗಾವಣೆ, ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆಯು ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ಆರ್ಥಿಕವಾಗಿ ಬೆಳೆಯಲು ಇದ್ದ ಅವಕಾಶಗಳನ್ನು ತಪ್ಪಿಸಿದ ಮೋದಿ, ತಮ್ಮ ಆಪ್ತ ಅನಿಲ್ ಅಂಬಾನಿಯ ನೂತನ ಉದ್ಯಮಕ್ಕೆ ಅನುವು ಮಾಡಿಕೊಟ್ಟು ದಳ್ಳಾಳಿಯಾಗಿದ್ದಾರೆ ಎಂದು ಅವರು ಟೀಕಿಸಿದರು.
ಯುಪಿಎ ಸರಕಾರದ ಅವಧಿಯಲ್ಲಿ ಭಾರತೀಯ ವಾಯು ಸೇನೆಗೆ ಫ್ರಾನ್ಸ್‌ನಿಂದ 126 ವಿಮಾನಗಳನ್ನು 54 ಸಾವಿರ ಕೋಟಿ ರೂ.ವೆಚ್ಚದಲ್ಲಿ ಖರೀದಿಸುವ ವ್ಯವಹಾರವಾಗಿತ್ತು. ದಸ್ಸಾಲ್ಟ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು 18 ವಿಮಾನಗಳು ಹಾರಾಟದ ಸ್ಥಿತಿಯಲ್ಲಿ ಭಾರತಕ್ಕೆ ಕೊಡುವುದು, ತಂತ್ರಜ್ಞಾನದ ವರ್ಗಾವಣೆ ಮೂಲಕ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆಯು ಉಳಿದ 108 ವಿಮಾನಗಳನ್ನು ಉತ್ಪಾದಿಸುವ ಯೋಜನೆ ಇತ್ತು. ಆದರೆ, 2016ರ ಎಪ್ರಿಲ್‌ನಲ್ಲಿ ಪ್ರಧಾನಿ ಮೋದಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ 60 ಸಾವಿರ ಕೋಟಿ ರೂ.ವೆಚ್ಚದಲ್ಲಿ 36 ವಿಮಾನಗಳನ್ನು ಖರೀದಿಸುವ ಅಂತಾರಾಷ್ಟ್ರೀಯ ಒಪ್ಪಂದವನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು ಎಂದು ಅವರು ದೂರಿದರು.
ಸುಮಾರು 34 ಸಾವಿರ ಕೋಟಿ ರೂ.ಸಾಲದ ಹೊರೆಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ, ಹೊಸದಾಗಿ ಆರಂಭಿಸಿರುವ ರಿಲಾಯನ್ಸ್ ಡಿಫೆನ್ಸ್ ಅಂಡ್ ಇಂಜಿನಿಯರಿಂಗ್ ಲಿಮಿಟೆಡ್ ಅವರಿಂದ ಈ ಯುದ್ಧ ವಿಮಾನಗಳಿಗೆ ಅಗತ್ಯವಿರುವ ಬಿಡಿ ಭಾಗಗಳನ್ನು 30 ಸಾವಿರ ಕೋಟಿ ರೂ.ವೆಚ್ಚದಲ್ಲಿ ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ದುರಾದೃಷ್ಟವೆಂದರೆ ಅವರ ಸಂಸ್ಥೆಗೆ ವಿಮಾನಗಳ ಉತ್ಪಾದನೆಯಲ್ಲಿ ಯಾವುದೇ ಅನುಭವವಿಲ್ಲ ಮತ್ತು ತಂತ್ರಜ್ಞಾನದ ಮಾಹಿತಿಯೂ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಯುಪಿಎ ಒಪ್ಪಂದದ ಪ್ರಕಾರ ಪ್ರತಿ ವಿಮಾನಕ್ಕೆ 526.10 ಕೋಟಿ ರೂ.ಬೆಲೆ ಇತ್ತು. ಆದರೆ, ಮೋದಿಯವರು ಮಾಡಿಕೊಂಡ ಒಪ್ಪಂದದಂತೆ ಪ್ರತಿ ವಿಮಾನಕ್ಕೆ 1670.70 ಕೋಟಿ ರೂ.ಆಗಿದೆ. ಮೋದಿ ಮಾಡಿಕೊಂಡ ಅಂತಾರಾಷ್ಟ್ರೀಯ ಒಪ್ಪಂದವು ಸಚಿವ ಸಂಪುಟದ ರಕ್ಷಣಾ ಉಪಸಭೆಯಲ್ಲಿ ಚರ್ಚೆಯೂ ಆಗಿಲ್ಲ ಮತ್ತು ರಕ್ಷಣಾ ಸಾಮಗ್ರಿಗಳ ಖರೀದಿಯ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಮಾಹಿತಿಯೇ ಇಲ್ಲದಂತಾಗಿದೆ. ಯುಪಿಎ ಸರಕಾರವು ಮಿರಾಜ್ ಮತ್ತು ಸುಕೋಯಿ ವಿಮಾನಗಳನ್ನು ಖರೀದಿಸುವಲ್ಲಿ ಸಂಸತ್ತಿಗೆ ಮತ್ತು ದೇಶಕ್ಕೆ ಅದರ ಬೆಲೆಗಳನ್ನು ತಿಳಿಸಿ, ಪಾರದರ್ಶಕವಾದ ವ್ಯವಹಾರಗಳನ್ನು ಮಾಡಿತ್ತು. ಆದರೆ, ಮೋದಿ ಸರಕಾರ ರಾಫೇಲ್ ವಿಮಾನದ ಬೆಲೆ 670 ಕೋಟಿ ರೂ.ಎಂದು ಸಂಸತ್ತಿಗೆ ತಿಳಿಸಿದರೂ, ದಸ್ಸಾಲ್ಟ್ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಇದರ ಬೆಲೆಯನ್ನು 1670 ಕೋಟಿ ರೂ.ಎಂದು ನಮೂದಿಸಲಾಗಿದೆ ಎಂದು ಅವರು ದಾಖಲೆ ಪ್ರದರ್ಶಿಸಿದರು.
ಪ್ರಧಾನಿಗೆ ಪ್ರಶ್ನೆಗಳು: 126 ವಿಮಾನಗಳು, ತಂತ್ರಜ್ಞಾನ ವರ್ಗಾವಣೆಯನ್ನು ಮರೆತು ಕೇವಲ 36 ವಿಮಾನಗಳನ್ನು ಕೊಳ್ಳುವುದಕ್ಕೆ ಕಾರಣವೇನು? ಸಚಿವ ಸಂಪುಟದ ರಕ್ಷಣಾ ಉಪ ಸಭೆ ಮತ್ತು ರಕ್ಷಣಾ ಸಾಮಗ್ರಿಗಳ ನಿಯಮಾವಳಿಗಳನ್ನು ಉಲ್ಲಂಘಿಸಿದ್ದೇಕೆ? ರಾಷ್ಟ್ರಕ್ಕೆ ಹೆಮ್ಮೆಯಾದ ಎಚ್‌ಎಎಲ್ ಕಾರ್ಖಾನೆಯನ್ನು ಮರೆತು ಖಾಸಗಿ ಉದ್ಯಮಕ್ಕೆ ಮಣೆ ಹಾಕಿದ ಔಚಿತ್ಯವೇನು? ಸರಕಾರವು ವಸ್ತುನಿಷ್ಠವಾಗಿ ಈ ವಿಮಾನಗಳ ಬೆಲೆಯನ್ನು ಹೇಳಲು ಏಕೆ ಹಿಂಜರಿಯುತ್ತಿದೆ? ಎಂದು ಅವರು ಪ್ರಶ್ನಿಸಿದರು.
ನರೇಂದ್ರ ಮೋದಿಯ ಮೌನವು ಈ ವ್ಯವಹಾರದಲ್ಲಿ ಹೆಚ್ಚು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ಶತಮಾನದಲ್ಲಿ ನಡೆದಂತಹ ಅತ್ಯಂತ ಕೆಟ್ಟ ವ್ಯವಹಾರವೆಂದು ಚರಿತ್ರೆಯಲ್ಲಿ ದಾಖಲಾಗುತ್ತದೆ. ಮೋದಿ ಹೇಳುತ್ತಿದ್ದ ಅಭಿವೃದ್ಧಿ ಮತ್ತು ಉತ್ತಮ ದಿನಗಳು ಬರೆ ಹರಟೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪ್ರಧಾನಿ ಈ ಬಗ್ಗೆ ಪ್ರಸಕ್ತ ಅಧಿವೇಶನದಲ್ಲೆ ಸತ್ಯಾಂಶ ಹೇಳಬೇಕು. ಇಲ್ಲದಿದ್ದರೆ, ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.