×
Ad

ರೈತ ಸಮಸ್ಯೆಗಳ ನಿವಾರಣೆಗೆ ಕೃಷಿ ತಜ್ಞರು ಶ್ರಮಿಸಲಿ: ಕೃಷಿ ಸಚಿವ ಶಿವಶಂಕರರೆಡ್ಡಿ

Update: 2018-07-26 19:35 IST

ಬೆಂಗಳೂರು, ಜು.26: ಕೃಷಿ ಕ್ಷೇತ್ರದಲ್ಲಿರುವ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಕೃಷಿ ವಿಜ್ಞಾನಿಗಳು ಹಾಗೂ ತಜ್ಞರು ಶ್ರಮಿಸಬೇಕು. ಆ ಮೂಲಕ ರೈತರು ಕೃಷಿ ಬೆಳೆಗಳ ಮೂಲಕ ಉತ್ತಮ ಆದಾಯ ಪಡೆಯುವಂತಾಗಬೇಕೆಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಆಶಿಸಿದರು.

ಗುರುವಾರ ನಗರದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕೃಷಿ ಬೆಲೆ ಆಯೋಗ, ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸದೃಢ ಮಾರುಕಟ್ಟೆ- ಕೇಂದ್ರದ ನೂತನ ಯೋಜನೆಗಳ ಸಮಗ್ರ ವಿಶ್ಲೇಷಣೆ’ ರಾಷ್ಟ್ರಮಟ್ಟದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಲಮನ್ನಾದಂತಹ ಯೋಜನೆಗಳು ರೈತರಿಗೆ ಅಲ್ಪಮಟ್ಟದ ಹೊರೆಯನ್ನು ಇಳಿಸಿದೆ. ರೈತರು ತಮ್ಮ ಸಮಸ್ಯೆಗಳಿಂದ ಸಂಪೂರ್ಣವಾಗಿ ಪರಿಹಾರ ಪಡೆಯುವಂತಹ ಕ್ರಮಗಳ ಬಗ್ಗೆ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳು ಕಾರ್ಯೋನ್ಮುಖರಾಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಯಾಗಾರದಲ್ಲಿ ಚರ್ಚೆಯಾಗುವ ವಿಷಯಗಳ ಮೇಲೆ ನಿರ್ಧರಿಸುವ ಅಂಶಗಳನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ಬೇರೆ ದೇಶಗಳ ರೈತರಿಗೆ ಹೋಲಿಸಿದಲ್ಲಿ ನಮ್ಮ ದೇಶದ ರೈತರು ಬೆಳೆಯುವ ಪ್ರತಿ ಹೆಕ್ಟೇರಿನ ಉತ್ಪಾದನೆ ಕಡಿಮೆ ಇದೆ. ಈಗಾಗಲೇ ಉತ್ಪಾದನೆ ಹೆಚ್ಚಿಸಿಕೊಳ್ಳುವತ್ತ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊತ್ತಿರುವ ಕೇಂದ್ರ ಸರಕಾರ ಮಾರುಕಟ್ಟೆ ಹಾಗೂ ಸಾಗಿಸುವ ವಿಧಾನಗಳ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಆಶಿಸಿದರು.

ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಮಾತನಾಡಿ, ಕೃಷಿಕರು ವಿಜ್ಞಾನಿಗಳಿಗಿಂತ ಬುದ್ಧಿವಂತರಿದ್ದು, ಪ್ರಾಯೋಗಿಕವಾಗಿ ತಮ್ಮ ಜೀವನವಿಡಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ರೈತರಿಗೆ ಮಾರುಕಟ್ಟೆ ಜಗತ್ತಿನಲ್ಲಿ ಉತ್ತಮ ಬೆಲೆ ಪಡೆದುಕೊಳ್ಳುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.   

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಕೃಷಿ ಕುರಿತ ಸರಕಾರಿ ಯೋಜನೆಗಳಲ್ಲಿ ಚಿಕ್ಕ ರೈತರು, ದೊಡ್ಡ ರೈತರು ಎಂದು ಭೇದ ಭಾವ ಮಾಡುವ ಯೋಜನೆಗಳಿಗೆ ತಮ್ಮ ಸಹಮತವಿಲ್ಲ. ರೈತರೆಂದರೆ ಎಲ್ಲರೂ ಒಂದೇ ಎಂದರು. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳೆರಡೂ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ರೈತ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಸಲು ಸಾಧ್ಯ. ಉತ್ತಮ ಬೆಲೆ ನಿರೀಕ್ಷಿಸಿದಲ್ಲಿ ಅದಕ್ಕೆ ಅಗತ್ಯವಿರುವ ಇತರೆ ಪೂರಕ ಅಂಶಗಳಾದ ಸಾಗಾಣಿಕೆ, ಉತ್ತಮ ಗೋದಾಮು, ಬೆಲೆಗಳ ಬಗ್ಗೆ ಆನ್‌ಲೈನ್ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳನ್ನು ಮೊದಲು ಸುಧಾರಿಸಿಕೊಳ್ಳುವ ಅಗತ್ಯವಿದೆಯೆಂದು ಅವರು ಹೇಳಿದರು. ರೈತ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಾಲಮನ್ನಾದಂತಹ ಕಾರ್ಯಕ್ರಮಕ್ಕಿಂತ ಉತ್ತಮ ರೀತಿಯಲ್ಲಿ ದಿನದ 24 ಗಂಟೆಯೂ ವಿದ್ಯುತ್, ನೀರು ಹಾಗೂ ಬೆಳೆದ ವೈಜ್ಞಾನಿಕ ಬೆಲೆ ದೊರಕಿಸಿಕೊಟ್ಟಲ್ಲಿ ರೈತರಿಗೆ ಅದಕ್ಕಿಂತ ಉತ್ತಮ ಸಹಾಯ ಮತ್ತೊಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ರಾಷ್ಟ್ರೀಯ ಮಳೆ ಆಶ್ರಿತ ಕೃಷಿ ಪ್ರಾಧಿಕಾರ ಕಾರ್ಯ ನಿರ್ವಹಣಾಧಿಕಾರಿ ಡಾ. ಅಶೋಕ್ ದಳವಾಯಿ ಮಾತನಾಡಿ, ಕೇಂದ್ರ ಸರಕಾರ 2022-23 ರೊಳಗೆ ರೈತರ ಆದಾಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿದ್ದು, ಅದಕ್ಕಾಗಿ ಅಗತ್ಯವಿರುವ ಕಾನೂನು, ಅಭಿವೃದ್ಧಿ ಸೇರಿದಂತೆ ಕೃಷಿ ಆಧರಿತ ಚಟುವಟಿಕಗಳ ವೈಜ್ಞಾನಿಕ ರೀತಿ ನೀತಿಗಳನ್ನು ಸೃಷ್ಟಿಸುವಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಕೃಷಿ ಆಯೋಗ ಹಾಗೂ ನೀತಿ ಆಯೋಗ ಜಂಟಿ ಸಭೆ ನಡೆಸಿ ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಶಾ ಪಟೇಲ್, ನವದೆಹಲಿಯ ಸಂಜೀವ್ ಕುಮಾರ್ ಚಡ್ಡಾ, ಹರಿಯಾಣದ ತೋಟಗಾರಿಕಾ ಮಹಾ ನಿರ್ದೇಶಕ ಡಾ. ಅರ್ಜುನ್‌ಸಿಂಗ್ ಸೈನಿ, ಮಧ್ಯಪ್ರದೇಶ ಕೃಷಿ ಮಂಡಿ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಫೈಯಾಜ್ ಅಹ್ಮದ್ ಕಿದ್ವಾಯ್ ಸೇರಿದಂತೆ ಕೃಷಿ ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು.

ಭವಿಷ್ಯದಲ್ಲಿ ಪ್ರತಿ 5 ರಿಂದ 6ಕೀಮಿ ಗಳ ವ್ಯಾಪ್ತಿಯ ಒಳಗಡೆ ನಡೆಯುವ ಸಂತೆಗಳನ್ನು ಕೃಷಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಿ ರೈತರು ತಾವು ಬೆಳೆದ ಬೆಳೆಗಳನ್ನು ಅಲ್ಲಿಯೇ ಮಾರುವ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳುವತ್ತ ಚರ್ಚೆಗಳಾಗಬೇಕಿದೆ. 1965ರ ಹಸಿರು ಕ್ರಾಂತಿಯ ಮುಖ್ಯ ಗುರಿ ದೇಶಕ್ಕೆ ಸಾಕಾಗುವಷ್ಟು ಆಹಾರವನ್ನು ನಮಗೆ ನಾವೇ ಬೆಳೆಯಬೇಕು ಎನ್ನುವುದಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದ್ದು ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಬೆಳೆಯಲಾಗುತ್ತಿದೆ. ಪ್ರಸ್ತುತ ಪೌಷ್ಠಿಕಾಂಶದ ಬೆಳೆಗಳನ್ನು ಬೆಳೆಯುವ ಬಗ್ಗೆ ಚಿಂತಿಸಲಾಗುತ್ತಿದೆ. ಜೊತೆಯಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ರೈತರಿಗೆ ದೊರಕಿ ಅವರ ಜೀವನ ಮಟ್ಟ ಸುಧಾರಿಸುವುದಕ್ಕಾಗಿ ಹಲವು ಅಂಶಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.
-ಡಾ. ಅಶೋಕ್ ದಳವಾಯಿ, ರಾಷ್ಟ್ರೀಯ ಮಳೆ ಆಶ್ರಿತ ಕೃಷಿ ಪ್ರಾಧಿಕಾರ ಕಾರ್ಯ ನಿರ್ವಹಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News