ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವವರನ್ನು ನನ್ನ ಬಳಿ ಕರೆದುಕೊಂಡು ಬನ್ನಿ: ಸಿ.ಎಂ ಕುಮಾರಸ್ವಾಮಿ

Update: 2018-07-26 14:29 GMT

ಬೆಂಗಳೂರು, ಜು.26: ಉತ್ತರ ಕರ್ನಾಟಕ ಭಾಗವನ್ನು ನಮ್ಮ ಸರಕಾರ ನಿರ್ಲಕ್ಷಿಸಿಲ್ಲ. ಬಜೆಟ್‌ನಲ್ಲಿ ಆ ಭಾಗಕ್ಕೆ ಸಾಕಷ್ಟು ಅನುದಾನವನ್ನು ಒದಗಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ನಗರದ ನೆಹರು ತಾರಾಲಯದ ಎದುರು ಇರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ತೆರಳಿ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವವರನ್ನು ನನ್ನ ಬಳಿ ಕರೆದುಕೊಂಡು ಬನ್ನಿ. ಬಂದ್‌ಗೆ ಕರೆ ನೀಡಿರುವ ಸಂಘಟನೆಯವರು ಯಾರು ಎಂದು ಪ್ರಶ್ನಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆಯೆ? ಉತ್ತರ ಕರ್ನಾಟಕದ ಅಭಿವೃದ್ಧಿ ಯಾರ ಅವಧಿಯಲ್ಲಿ ಎಷ್ಟು ಆಗಿದೆ ಎಂಬುದರ ಕುರಿತು ಸಾರ್ವಜನಿಕವಾಗಿ ಚರ್ಚೆ ನಡೆಸಲು ಸಿದ್ಧರಿದ್ದೇವೆ. ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವವರೇ ಈ ಬಗ್ಗೆ ಚರ್ಚೆ ಆರಂಭಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ರೈತರ ಸಾಲ ಮನ್ನಾ ವಿಚಾರವನ್ನು ಪದೇ ಪದೇ ಚರ್ಚೆ ಮಾಡೋದು ಬೇಡ. ಇವತ್ತು ಬಂದಿರುವುದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿ. ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ. ಹೋರಾಟ, ಪ್ರತಿಭಟನೆ ಮಾಡೋದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಈಗಲಾದರೂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರಲ್ಲ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ದೇಶದಲ್ಲೆ ಮೊದಲ ಬಾರಿಗೆ ದೊಡ್ಡ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದೇನೆ. ಬಿಜೆಪಿಯವರು ನನಗೆ ಬೆಂಬಲ ಸೂಚಿಸೋದಕ್ಕೆ ಪಾದಯಾತ್ರೆ ಮಾಡುತ್ತಾರೋ ಅಥವಾ ವಿರೋಧಿಸಲು ಮಾಡುತ್ತಿದ್ದಾರೋ ಅನ್ನೋದನ್ನು ಸ್ಪಷ್ಟಪಡಿಸಲಿ. ಕೆಲವರಿಗೆ ಈ ಹೋರಾಟದಿಂದ ವೈಯಕ್ತಿಕವಾಗಿ, ರಾಜಕೀಯವಾಗಿ ಲಾಭವಾಗಬಹುದು. ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಿಂದ ರೈತರ ಸಾಲವನ್ನು ಏಕೆ ಮನ್ನಾ ಮಾಡುತ್ತಿಲ್ಲ ಅನ್ನೋದನ್ನು ಬಿಜೆಪಿಯವರು ಹೇಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಶಾಸಕ ಡಾ.ಅಜಯ್‌ಸಿಂಗ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸುಮಾರು 450 ಟನ್ ತೂಕದ ಭಾರಿ ಗಾತ್ರದ ವೀರಗಲ್ಲನ್ನು ಕೆತ್ತಿಸಲ್ಪಟ್ಟಿದ್ದು, ಅದನ್ನು ಮುಂದಿನ ಕಾರ್ಗಿಲ್ ವಿಜಯೋತ್ಸವ ದಿನದ ವೇಳೆಗೆ ಬೆಂಗಳೂರಿಗೆ ತಂದು ಪ್ರತಿಷ್ಠಾಪಿಸುವ ಸಂಬಂಧ ಸಭೆ ಕರೆದು ಚರ್ಚಿಸಲಾಗುವುದು.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News