ಅನಧಿಕೃತ ಫ್ಲೆಕ್ಸ್, ಕೇಬಲ್ ತೆರವಿಗೆ ನೋಡಲ್ ಅಧಿಕಾರಿಗಳ ನೇಮಕ: ಡಿಸಿಎಂ ಪರಮೇಶ್ವರ್

Update: 2018-07-26 15:08 GMT

ಬೆಂಗಳೂರು, ಜು. 26: ಬೆಂಗಳೂರು ನಗರದಲ್ಲಿನ ಅನಧಿಕೃತ ಫ್ಲೆಕ್ಸ್, ಕೇಬಲ್‌ಗಳ ತೆರವುಗೊಳಿಸುವ ಸಂಬಂಧ ತೀರ್ಮಾನಿಸಲು ಎಂಟು ವಲಯಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಬಸ್ ಶೆಲ್ಟರ್ ಪ್ಯಾಕೇಜ್ ಟೆಂಡರ್ ಸಂಬಂಧ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿಯೊಂದಕ್ಕೂ ಆಯುಕ್ತರ ಬಳಿಯೇ ಬರುವುದು ಕಷ್ಟ. ಹೀಗಾಗಿ ಆಯಾ ವಲಯಗಳಲ್ಲಿ ನೋಡಲ್ ಅಧಿಕಾರಿ ನೇಮಿಸಿದರೆ, ಕೇಬಲ್, ಫ್ಲೆಕ್ಸ್ ತೆರವುಗೊಳಿಸಲು ನಿರ್ಧಾರ ಕೈಗೊಳ್ಳಬಹುದು.

ನಗರದಲ್ಲಿನ ಅನಧಿಕೃತ ಕೇಬಲ್ ಮತ್ತು ಫ್ಲೆಕ್ಸ್ ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಜತೆ ಕೈಜೋಡಿಸುವಂತೆ ಬೆಂಗಳೂರಿನ ಎಲ್ಲ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಿದ್ದೇನೆ. ಹೀಗಾಗಿ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಅವರ ನೆರವು ಪಡೆದುಕೊಳ್ಳಬಹುದು.

ಟೆಂಡರ್ ಶ್ಯೂರ್ ಯೋಜನೆ ಕೈಗೊಂಡಿರುವ ವಿವಿಧ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದ ಕಾಮಗಾರಿಗಳಿಂದ ಜನರಿಗೆ ತೊಂದರೆಯಾಗಿದ್ದು, ಕೂಡಲೇ ಅದನ್ನು ನಿವಾರಿಸಬೇಕು ಎಂದು ಸಲಹೆ ಮಾಡಿದರು.

ಪರಿಶಿಷ್ಟರಿಗೆ ಮೀಸಲು: ಬೆಂಗಳೂರು ನಗರದಲ್ಲಿ 1200 ಹೊಸ ಬಸ್ ಶೆಲ್ಟರ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದ್ದು, ಆ ಪೈಕಿ 297ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಿಟ್ಟಿದೆ. ಈ ಟೆಂಡರ್‌ಗೆ 10 ಕೋಟಿ ರೂ. ವ್ಯವಹಾರ ಇರಬೇಕೆಂಬ ಷರತ್ತಿದ್ದು, ಅದನ್ನು ಸಡಿಸಲಿಸಬೇಕು. ಇದರಿಂದ ಪರಿಶಿಷ್ಟರಿಗೆ ಸಹಾಯವಾಗಲಿದೆ. ಪರಿಶಿಷ್ಟರಿಗೆ ಈ ಮೊತ್ತ ಕಡಿಮೆ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News