ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ವಿಚಾರ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2018-07-26 15:31 GMT

ಬೆಂಗಳೂರು, ಜು.26: ನಗರದ ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬಿ.ಪಿ.ಮಹೇಶ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ವೇಳೆ ಸರಕಾರಿ ವಕೀಲ ಪ್ರಶಾಂತ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಆ.17ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಅಶೋಕ್ ಪಾಟೀಲ್ ವಾದ ಮಂಡಿಸಿ, ಯೋಜನೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಈ ಕುರಿತಂತೆ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹೀಗಿದ್ದರೂ ಕಳೆದ 8 ತಿಂಗಳಿಂದ ಸರಕಾರ ಅರ್ಜಿ ವಿಚಾರಣೆ ಮುಂದೂಡಿಸುತ್ತಿದ್ದು, ವಿಚಾರಣೆ ವಿಳಂಬವಾಗುತ್ತಿದೆ. ಅತ್ತ ಕಾಮಗಾರಿ ಪೂರ್ಣಪ್ರಮಾಣದಲ್ಲಿ ನಡೆಯುತ್ತಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೇಲ್ಸೇತುವೆ ನಿರ್ಮಾಣ ವಿಚಾರದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ. ಯೋಜನೆ ಅದರ ಪಾಡಿಗೆ ನಡೆಯಲಿ. ಒಂದೊಮ್ಮೆ ನಿಯಮ ಉಲ್ಲಂಘನೆಯಾಗಿದ್ದರೆ ಮುಂದೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನುಡಿಯಿತು.

ಅರ್ಜಿದಾರರ ವಾದವೇನು: ಮೇಲ್ಸೇತುವೆ ನಿರ್ಮಾಣ ಯೋಜನೆಗಾಗಿ ಭಾರತೀಯ ರಸ್ತೆ ಕಾಂಗ್ರೆಸ್ ನಿಯಮ ಪಾಲಿಸಿಲ್ಲ. ಯೋಜನೆ ಜಾರಿಯ ಬಗ್ಗೆ ಯಾವುದೇ ಮೌಲ್ಯಮಾಪನ ನಡೆಸಿಲ್ಲ. ಸೇತುವೆ ನಿರ್ಮಿಸಿದರೂ ಸಹ ಮುಂದೆ ಶೇಷಾದ್ರಿಪುರಂ ಕಡೆಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಸೇತುವೆ ಅಡ್ಡಿಯಾಗುತ್ತದೆ. ಅವೈಜ್ಞಾನಿಕವಾಗಿರುವ ಈ ಯೋಜನೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ಬದಲು, ಮತ್ತಷ್ಟು ಹೆಚ್ಚಾಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News