ಶಕ್ತಿಕೇಂದ್ರ ವಿಧಾನಸೌಧ ಇನ್ನು ‘ಆಡಳಿತಾತ್ಮಕ ವಲಯ’

Update: 2018-07-26 15:36 GMT

ಬೆಂಗಳೂರು, ಜು. 26: ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿ, ಬಹುಮಹಡಿ ಕಟ್ಟಡ ಸೇರಿ ಸುತ್ತಮುತ್ತಲಿನ ಪ್ರದೇಶವನ್ನು ‘ಆಡಳಿತಾತ್ಮಕ ವಲಯ’ ಎಂದು ಘೋಷಿಸಿ ಶಸ್ತ್ರಸಜ್ಜಿತ ವಿಶೇಷ ಭದ್ರತೆ ಕಲ್ಪಿಸಲು ಮೈತ್ರಿ ಸರಕಾರ ನಿರ್ಧರಿಸಿದೆ. ಹೀಗಾಗಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಕ್ಕೆ ಇನ್ನು ಮುಂದೆ ಸುಖಾಸುಮ್ಮನೆ ಬಂದು-ಹೋಗುವವರಿಗೆ ಕಡಿವಾಣ ಬೀಳಲಿದೆ. ವಿಧಾನಸೌಧ ಮತ್ತು ವಿಕಾಸಸೌಧದ ಕಾರಿಡಾರ್‌ಗಳಲ್ಲಿ ಮನಸೋ ಇಚ್ಛೆ ತಿರುಗಾಡುವ ಸಾರ್ವಜನಿಕರು, ಪಕ್ಷಗಳ ಕಾರ್ಯಕರ್ತರಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.

ಶಕ್ತಿಕೇಂದ್ರ ವಿಧಾನಸೌಧ ಸೇರಿ ಸುತ್ತಮುತ್ತಲಿನ ಸರಕಾರಿ ಕಚೇರಿಗಳ ಸಂಕೀರ್ಣವನ್ನು ‘ಆಡಳಿತಾತ್ಮಕ ವಲಯ’ವೆಂದು ಘೋಷಿಸಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಉದ್ದೇಶಿಸಿದ್ದು, ಇದರಿಂದ ಸಾರ್ವಜನಿಕರು ಸೇರಿ ಎಲ್ಲರಿಗೂ ವಿಧಾನಸೌಧ ಮುಕ್ತ ಪ್ರವೇಶಕ್ಕೆ ಕಡಿವಾಣ ಬೀಳಲಿದೆ ಎಂದು ಗೊತ್ತಾಗಿದೆ.

ಪಾಸ್ ಇದ್ದರಷ್ಟೇ ಪ್ರವೇಶ: ಆಡಳಿತಾತ್ಮಕ ವಲಯ ಎಂದು ಘೋಷಿಸಿದ ಬಳಿಕ ಭದ್ರತೆಗೆ ಶಸ್ತ್ರ ಸಜ್ಜಿತ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಿದ್ದು, ನಿಗದಿತ ಪಾಸ್ ಇದ್ದವರಿಗೆ ನಿಗದಿತ ಸಮಯದಲ್ಲಿ ಮಾತ್ರವೇ ಪ್ರವೇಶ ಸಿಗಲಿದೆ ಎಂದು ಹೇಳಲಾಗಿದೆ.

ವಿಧಾನಸೌಧ ಮತ್ತು ವಿಕಾಸಸೌಧ ಸೇರಿ ಸುತ್ತಮುತ್ತಲಿನ ಕಚೇರಿ ಕಾರಿಡಾರ್‌ಗಳಲ್ಲಿ ನಿಂತು ಅನಗತ್ಯ ಹರಟೆ ಹೊಡೆಯುವುದು ಮತ್ತು ಕಚೇರಿ ಸಿಬ್ಬಂದಿಯೂ ಬೇಕಾಬಿಟ್ಟಿ ತಿರುಗಾಟ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವ ಕಚೇರಿಗಳ ಮುಂದೆ ನಿಲ್ಲುವುದಕ್ಕೂ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಸಿಎಂ ಕುಮಾರಸ್ವಾಮಿ, 'ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳು ಪದೇ-ಪದೇ ಮಾಹಿತಿ ಕೋರುವುದರಿಂದ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ. ಹೀಗಾಗಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು' ಎಂದು ಹೇಳಿದ್ದರು. ಹೀಗಾಗಿ ಶಕ್ತಿಕೇಂದ್ರಕ್ಕೆ ಭದ್ರತೆ ಮತ್ತು ಪತ್ರಕರ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News