ಉತ್ತರ ಕರ್ನಾಟಕ ಬಂದ್ ಕೈಬಿಡಿ: ಡಿಸಿಎಂ ಪರಮೇಶ್ವರ್ ಮನವಿ

Update: 2018-07-26 16:11 GMT

ಬೆಂಗಳೂರು, ಜು. 26: ಉತ್ತರ ಕರ್ನಾಟಕವನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ಅಖಂಡ ಕರ್ನಾಟಕದಲ್ಲಿ ಎಲ್ಲ ಭಾಗದವರೂ ಒಂದೇ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಅನ್ಯಾಯ ಮಾಡುವುದಿಲ್ಲ. ಹೀಗಾಗಿ ಆಗಸ್ಟ್ 2ಕ್ಕೆ ಕರೆ ನೀಡಿರುವ ‘ಉತ್ತರ ಕರ್ನಾಟಕ ಬಂದ್’ ಕೈಬಿಡಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಖಂಡ ಕರ್ನಾಟಕ ನಮ್ಮದು. ಕರ್ನಾಟಕದಲ್ಲಿ ಆ ಭಾಗ, ಈ ಭಾಗ ಎಂದು ಯಾರೂ ಭೇದ ಮಾಡಿಲ್ಲ. ರೈತರ ಸಾಲಮನ್ನಾವನ್ನು ಎಲ್ಲ ಜಿಲ್ಲೆಯ ರೈತರಿಗೂ ಮಾಡಿದ್ದೇವೆ ಎಂದು ಹೇಳಿದರು.

ಎಸ್ಸೆಂ ಕೃಷ್ಣ ಅವರ ಅವಧಿಯಲ್ಲಿ ರಾಜ್ಯದ ಹಿಂದುಳಿದ 114 ತಾಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದ ಸಮತಿ ವರದಿ ಆಧರಿಸಿ ಕಳೆದ ಏಳು ವರ್ಷಗಳಲ್ಲಿ 19 ಸಾವಿರ ಕೋಟಿ ರೂ.ಗಳನ್ನು ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ.

 ಹಿಂದಿನ ಯುಪಿಎ ಸರಕಾರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಕಲಂ 371‘ಜೆ’ ಅನ್ವಯ ಬೀದರ್, ಕಲಬುರಗಿ ಸೇರಿದಂತೆ ಆ ಭಾಗದ ಆರು ಜಿಲ್ಲೆಗಳಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿದೆ. ನೀರಾವರಿ, ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಅಲ್ಲದೆ, ಉದ್ಯೋಗದಲ್ಲಿಯೂ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ ಎಂದರು.

ಉತ್ತರ ಕರ್ನಾಟಕವನ್ನು ಅಭಿವೃದ್ಧಿ ದೃಷ್ಟಿಯಲ್ಲಿ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಮೈತ್ರಿ ಸರಕಾರ ಆದ್ಯತೆ ನೀಡಲಿದೆ. ಹೀಗಾಗಿ ಉತ್ತರ ಕರ್ನಾಟಕ ಬಂದ್ ಕರೆಯನ್ನು ಕೈಬಿಡಬೇಕು ಎಂದು ಪರಮೇಶ್ವರ್ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News