ಎಸ್ಸಿ, ಎಸ್ಟಿ ಮೀಸಲಾತಿ ಪರಿಪೂರ್ಣವಾಗಿ ಜಾರಿಯಾಗಿಲ್ಲ: ಬಂಜಗೆರೆ ಜಯಪ್ರಕಾಶ್

Update: 2018-07-26 16:23 GMT

ಬೆಂಗಳೂರು, ಜು.26: ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಮೀಸಲಾತಿ ವಿರುದ್ಧವಾಗಿದ್ದಾರೆ. ಹೀಗಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಇಂದಿಗೂ ಮೀಸಲಾತಿ ಪರಿಪೂರ್ಣವಾಗಿ ಜಾರಿಯಾಗಿಲ್ಲವೆಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನಗರದ ಎನ್‌ಜಿಒ ಸಭಾಂಗಣದಲ್ಲಿ ಮೀಸಲಾತಿ ಜನಕ ಛತ್ರಪತಿ ಶಾಹುಮಹಾರಾಜ್ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ಸಮ್ಮಿಶ್ರ ಸರಕಾರದಲ್ಲಿ ಶೋಷಿತ ಸಮುದಾಯಗಳು ಮತ್ತು ಸಾಮಾಜಿಕ ನ್ಯಾಯ’ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಡ್ತಿ ಮೀಸಲಾತಿ ರದ್ದು ಪಡಿಸಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರೆ ತೀರ್ಪು ನೀಡುತ್ತಾರೆ. ಉನ್ನತ ಸ್ಥಾನದಲ್ಲಿರುವವರು ದೇಶದ ಸಾಮಾಜಿಕ ಪರಿಸ್ಥಿತಿ ಸರಿಯಾಗಿ ಗ್ರಹಿಸದೆ, ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದರೆ, ಕೆಳ ಹಂತದ ಅಧಿಕಾರಿಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಯಾವುದೆ ಅನುಮಾನವಿಲ್ಲ. ಹೀಗಾಗಿ ನ್ಯಾಯಾಲಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಾವಿರಾರು ವರ್ಷಗಳಿಂದಲೂ ಅನ್ಯಾಯವಾಗಿದೆ. ಇದಕ್ಕೆ ಪ್ರತಿಕಾರವಾಗಿ ಅವರೆಂದಿಗೂ ಹಿಂಸಾಚಾರಕ್ಕೆ ಇಳಿದಿಲ್ಲ. ಸುಪ್ರೀಂ ಕೋರ್ಟ್ ಭಡ್ತಿ ಮೀಸಲಾತಿ ರದ್ದು ಪಡಿಸಿ ತೀರ್ಪು ನೀಡಿದ್ದರೂ ಶಾಂತಿಯುತವಾಗಿ ಒತ್ತಾಯಿಸಿದ್ದಾರೆ. ಆದರೆ, ಭ್ರಷ್ಟಾಚಾರ, ಅನೀತಿ ನಡೆಸಿದ ಸ್ವಾಮೀಜಿಗಳ ವಿರುದ್ಧ ನ್ಯಾಯಾಲಯಗಳು ತೀರ್ಪು ನೀಡಿದರೆ ವ್ಯಾಪಕ ಹಿಂಸಾಚಾರ ನಡೆಯುತ್ತದೆ. ದೇಶದಲ್ಲಿ ಇಂತಹ ವಿಷಮಯ ಪರಿಸ್ಥಿತಿಯಿರುವಾಗ ಗೌರವಯುಕ್ತ ಸ್ಥಾನದಲ್ಲಿರುವವರು ಸಾಮಾಜಿಕ ನ್ಯಾಯದ ಪರವಾಗಿರಬೇಕು ಎಂದು ಅವರು ಆಶಿಸಿದರು.

ಕೆಲ ಬ್ಯಾಂಕ್‌ಗಳಲ್ಲಿ ದಲಿತ ಸಮುದಾಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ. ಅಪಾರ ಶ್ರಮ, ಶ್ರದ್ಧೆಯಿಂದ ಉನ್ನತ ಸ್ಥಾನಕ್ಕೇರುವ ದಲಿತ ಸಮುದಾಯದ ಅಧಿಕಾರಿಗಳು, ನೌಕರರನ್ನು ಸಮಾನತೆಯಿಂದ ಕಾಣುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಅಭಿಪ್ರಾಯಿಸಿದರು.

ದಸಂಸ ರಾಜ್ಯ ಸಂಚಾಲಕ ಮೋಹನ್‌ರಾಜ್ ಮಾತನಾಡಿ, ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿತು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಈ ಯೋಜನೆಗಳನ್ನು ಮುಂದುವರೆಸುವಂತಹ ಲಕ್ಷಣಗಳು ಕಾಣುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ದಸಂಸ ಸಂಚಾಲಕ ಎಂ.ಸಿ.ನಾರಾಯಣ್, ಪೆರಿಯಾರ್ ವಿಚಾರವಾದಿ ಕಲೈಸೆಲ್ವಿ, ಪ್ರಾಧ್ಯಾಪಕ ಡಾ.ಲಿಂಗಣ್ಣ ಜಂಗಮರಹಳ್ಳಿ, ಬಸವರಾಜ್ ಕೌತಾಳ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News