ಫೇಸ್‌ಬುಕ್ ಬಳಕೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ದೇಶದಲ್ಲೇ 3ನೇ ಸ್ಥಾನ

Update: 2018-07-26 16:42 GMT

ಬೆಂಗಳೂರು, ಜು.26: ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ವಹಿಸುತ್ತಿರುವ ಫೇಸ್‌ಬುಕ್ ಪುಟ ಬಳಕೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ವಹಿಸುತ್ತಿರುವ ಫೇಸ್ ಬುಕ್ ಪುಟ ಅತ್ಯಂತ ಜನಪ್ರಿಯವಾಗಿದ್ದು, ಈ ಸಂಬಂಧ ಫೇಸ್‌ಬುಕ್ ತಂಡ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುಭಾಶಯಗಳನ್ನು ಕಳುಹಿಸಿದೆ.

ದೇಶದ ವಿವಿಧ ರಾಜ್ಯಗಳ ಸರಕಾರಿ ಇಲಾಖೆಗಳು, ವಿಭಾಗಗಳು, ರಾಜಕೀಯ ಪಕ್ಷಗಳ ಫೇಸ್‌ಬುಕ್ ಪುಟದ ಕುರಿತು ಇತ್ತಿಚೆಗೆ ಅಂಕಿಅಂಶ ಬಿಡುಗಡೆ ಮಾಡಿದೆ. 2017ರ ಜನವರಿ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಫೇಸ್‌ಬುಕ್ ಪುಟಗಳ ಜನಪ್ರಿಯತೆ, ಪುಟಗಳಲ್ಲಿ ಸಾರ್ವಜನಿಕರ ಜತೆ ಸಂವಹನ, ಅದಕ್ಕೆ ಬರುವ ಪ್ರತಿಕ್ರಿಯೆಗಳು, ಶೇರ್ ಮತ್ತು ಗುರಿಯನ್ನು ಮೌಲ್ಯಮಾಪನ ಮಾಡಲಾಗಿದೆ. ದೇಶದ ವಿವಿಧ ನಗರಗಳ ಟ್ರಾಫಿಕ್ ಪೊಲೀಸ್‌ರ ಪುಟಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ ಟಾಪ್ ಮೂರರಲ್ಲಿ ಸ್ಥಾನ ಪಡೆದಿದೆ.

ಇನ್ನು ಫೇಸ್ ಬುಕ್ ತಂಡದಿಂದ ಪ್ರಶಂಸೆ ಪಡೆದ ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶ್ಲಾಘಿಸಿದ್ದು, ಬೆಂಗಳೂರು ಸಿಟಿ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಎರಡೂ ವಿಭಾಗಗಳು ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿವೆ. ಈ ಮೂಲಕ ಜನತೆಯೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News