×
Ad

5 ಸಾವಿರ ಬೋಧಕ ಸಿಬ್ಬಂದಿ ನೇಮಕ: ಸಚಿವ ಜಿ.ಟಿ.ದೇವೇಗೌಡ

Update: 2018-07-27 18:10 IST

ಬೆಂಗಳೂರು, ಜು. 27: ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಹುದ್ದೆ ಸೇರಿದಂತೆ ಒಟ್ಟು 5 ಸಾವಿರ ಬೋಧಕ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪದವಿ ಕಾಲೇಜುಗಳಲ್ಲಿನ 5 ಸಾವಿರ ಬೋಧಕ ಸಿಬ್ಬಂದಿ ನೇಮಕಾತಿಗೆ ಈಗಾಗಲೇ ಹಣಕಾಸು ಇಲಾಖೆ ಸಮ್ಮತಿಸಿದ್ದು, ಆರು ತಿಂಗಳಲ್ಲಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಪದವಿ ಕಾಲೇಜುಗಳಲ್ಲಿ 395 ಪ್ರಾಂಶುಪಾಲರ ಹುದ್ದೆ, 800 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಹೀಗಾಗಿ ಪ್ರಾಂಶುಪಾಲರು ಸೇರಿದಂತೆ ಬೋಧಕ ಸಿಬ್ಬಂದಿ ನೇಮಕಾತಿ ಸಂಬಂಧ ಸಿಎಂ ಕುಮಾರಸ್ವಾಮಿ ಜತೆ ಚರ್ಚಿಸಿದ್ದು, ಅವರೂ ಒಪ್ಪಿಗೆ ನೀಡಿದ್ದಾರೆಂದು ಜಿ.ಟಿ.ದೇವೇಗೌಡ ತಿಳಿಸಿದರು.

ಬೋಧಕ ಸಿಬ್ಬಂದಿ ನೇಮಕಾತಿಯನ್ನು ಕೆಪಿಎಸ್ಸಿ ಅಥವಾ ನೇರವಾಗಿ ಅಂಕಗಳನ್ನು ಆಧರಿಸಿ ನೇಮಕ ಮಾಡಬೇಕೆಂಬ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಕಾನೂನಿನ ಅನ್ವಯ, ಯಾವುದೇ ವಿಳಂಬವಿಲ್ಲದೆ ಸಿಬ್ಬಂದಿ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಕಾಲೇಜು ಕಟ್ಟಡ ನಿರ್ಮಾಣ: ರಾಜ್ಯದ 102 ಸರಕಾರಿ ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ 250 ಕೋಟಿ ರೂ.ಅನುದಾಯ ಮೀಸಲಿಟ್ಟಿದ್ದು, ಕಾರ್ಪೋರೇಟ್ ಸಂಸ್ಥೆಗಳು, ನಬಾರ್ಡ್ ಮತ್ತು ವಿಶ್ವಬ್ಯಾಂಕ್ ನೆರವು ಪಡೆದು ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ಕುಲಪತಿಗಳ ಜತೆ ಸಭೆ: ಕಾಲೇಜು ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಆಗಸ್ಟ್ 1ರಿಂದ ಉನ್ನತ ಶಿಕ್ಷಣ ಮಂಡಳಿ ಸಭೆ ಕರೆಯಲಾಗಿದೆ. ಆಗಸ್ಟ್ 2 ಮತ್ತು 3ರಂದು ಕುಲಪತಿಗಳು ಮತ್ತು ಕುಲಸಚಿವರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಅರ್ಹರ ನೇಮಕ: ರಾಜ್ಯದ ವಿಶ್ವ ವಿದ್ಯಾಲಯಗಳಿಗೆ ಅರ್ಹತೆಯುಳ್ಳ, ಶಿಕ್ಷಣ ತಜ್ಞರನ್ನು ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗುವುದು ಎಂದ ಅವರು, ಅನರ್ಹರನ್ನು ಯಾವುದೇ ಕಾರಣಕ್ಕೂ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೌಶಲ್ಯಾಭಿವೃದ್ಧಿ ಕೋರ್ಸ್ ಪಠ್ಯಕ್ರಮ
‘ಬಿಎ ಪದವಿಗೆ ಇತ್ತೀಚೆಗೆ ಬೇಡಿಕೆ ಕಡಿಮೆಯಾಗುತ್ತಿದ್ದು, ಈ ವಿಷಯದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗವೂ ಸಿಗುತ್ತಿಲ್ಲ. ಹೀಗಾಗಿ ಪದವಿ ವಿಷಯದೊಂದಿಗೆ ಕೌಶಲ್ಯಾಭಿವೃದ್ಧಿ ಕೋರ್ಸ್‌ನ ಪಠ್ಯಕ್ರಮವನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಪದವೀಧರರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಆದ್ಯತೆ’
-ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News