ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಕ್ರಮ: ಸಚಿವ ಸಾ.ರಾ.ಮಹೇಶ್

Update: 2018-07-27 12:53 GMT

ಬೆಂಗಳೂರು, ಜು.27: ರಾಜ್ಯವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಐದನೆ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯವನ್ನು ಎರಡನೆ ಸ್ಥಾನಕ್ಕೆ ಕೊಂಡೊಯ್ಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು.

ಶುಕ್ರವಾರ ನಗರದ ಅರಮನೆಯಲ್ಲಿ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್(ಐಐಟಿಎಂ)ನ 106ನೆ ಪ್ರವಾಸಿ ಪ್ರದರ್ಶನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಒತ್ತು ನೀಡಲಾಗುವುದು ಎಂದರು.

ಇಡೀ ದೇಶದಲ್ಲೆ ಅತೀ ಹೆಚ್ಚು ವನ್ಯಜೀವಿಗಳು ಇರುವುದು ನಮ್ಮ ರಾಜ್ಯದಲ್ಲಿ. ಆದರೆ, ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಪ್ರಮಾಣದ ಪ್ರಚಾರವನ್ನು ನಮ್ಮ ರಾಜ್ಯದಲ್ಲಿ ನೀಡುತ್ತಿಲ್ಲ ಎಂದ ಅವರು, ದೇಶದ ಇತರ ರಾಜ್ಯಗಳು ಹಾಗೂ ವಿದೇಶಿಯರನ್ನು ನಮ್ಮ ರಾಜ್ಯದ ಕಡೆ ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ನೀಡಲಾಗುವುದು ಎಂದರು.

ರಾಜ್ಯದಲ್ಲಿರುವ ಜಲಪಾತಗಳ ಸರಣಿ ದರ್ಶನದ ಕುರಿತು ಕಾರ್ಯಕ್ರಮ ರೂಪಿಸಲು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷ ಉತ್ತಮ ಮಳೆಯಾಗಿ ಎಲ್ಲ ಜಲಪಾತಗಳು ಆಕರ್ಷಣೀಯವಾಗಿವೆ. ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಿರಲಿಲ್ಲ. ಆದಷ್ಟು ಶೀಘ್ರ ಈ ಸಂಬಂಧ ಕಾರ್ಯಕ್ರಮ ಸಿದ್ಧಪಡಿಸಲಾಗುವುದು ಎಂದರು.

ಗೋಲ್ಡನ್ ಚಾರಿಯೇಟ್ ರೈಲು 40 ಕೋಟಿ ರೂ.ನಷ್ಟದಲ್ಲಿತ್ತು. ಆದರೆ, ಈ ವರ್ಷ 12 ಲಕ್ಷ ರೂ.ಲಾಭ ಬಂದಿದೆ. ಗೋಲ್ಡನ್ ಚಾರಿಯೇಟ್ ರೈಲಿನ ಸದ್ಬಳಕೆಗೆ ವಿಶೇಷ ಪ್ಯಾಕೇಜ್‌ಗಳನ್ನು ಮಾಡುವ ಕುರಿತು ಚಿಂತನೆ ನಡೆದಿದೆ. ಮೂರು ದಿನಗಳ ಈ ಪ್ರವಾಸಿ ಪ್ರದರ್ಶನ ಉತ್ಸವವು ನಾಗರಿಕರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು.

ಸುಮಾರು 15 ಹಾಗೂ 20ಕ್ಕೂ ಹೆಚ್ಚು ರಾಜ್ಯಗಳಿಂದ 450 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಹಲವು ರಾಷ್ಟ್ರೀಯ ಪ್ರವಾಸಿ ಸಂಘಟನೆಗಳು, ಪ್ರಮುಖ ಪ್ರವಾಸಿ ನಿರ್ವಹಣಾ ಸಂಸ್ಥೆಗಳು, ಹೊಟೇಲ್‌ಗಳು, ರೆಸಾರ್ಟ್‌ಗಳು ಸೇರಿದಂತೆ ಇನ್ನಿತರರು ತಮ್ಮ ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲಿದ್ದಾರೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

ಸ್ಪಿಯರ್ ಟ್ರಾವೆಲ್ ಮೀಡಿಯಾ ಅಂಡ್ ಎಕ್ಸಿಬಿಷನ್ ನಿರ್ದೇಶಕ ರೋಹಿತ್ ಹಾನಗಲ್, ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ 20ನೆ ಮೇಳ ಇದಾಗಿದೆ. ವಿನೂತನ ಪ್ರವಾಸಿ ಪ್ಯಾಕೇಜ್‌ಗಳು, ವಿಶಿಷ್ಟ ತಾಣಗಳು, ಅತ್ಯಾಕರ್ಷಕ ಸೇವೆಗಳ ಮಾಹಿತಿ ನೀಡುವ ಜೊತೆಗೆ, ಸಂಸ್ಕೃತಿ, ಪರಂಪರೆ, ಸಾಹಸ, ತೀರ್ಥ ಕ್ಷೇತ್ರಗಳು, ವನ್ಯಜೀವಿ ತಾಣಗಳು, ಪ್ರಕೃತಿ ಸೊಬಗಿನ ತಾಣಗಳ ಬಗ್ಗೆ ಒಂದೇ ಸೂರಿನಡಿ ಮಾಹಿತಿ ಒದಗಿಸುವ ಪ್ರಯತ್ನ ಇದಾಗಿದೆ ಎಂದರು.

ಪ್ರವಾಸಿ ಅಧ್ಯಯನಗಳು ಹಾಗೂ ವಿದ್ಯಮಾನಗಳ ಪ್ರಕಾರ 2018-19ರಲ್ಲಿ 2 ಕೋಟಿ ಭಾರತೀಯ ಪ್ರವಾಸಿಗರು ವಿದೇಶಿ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ಕಡಿಮೆ ದರದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ದರ ಹಾಗೂ ಪ್ರವಾಸಿ ಪ್ಯಾಕೇಜ್‌ಗಳು ಮಾಸಿಕ ಕಂತಿನಲ್ಲಿ ಪಾವತಿಸಲು ಅವಕಾಶ ಇರುವುದರಿಂದ ವಿದೇಶ ಪ್ರವಾಸ ಈಗ ಐಷಾರಾಮಿ ವಿಷಯವಾಗಿ ಉಳಿದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಅಂದಾಜು 56.1 ಕೋಟಿ ಪ್ರವಾಸಿಗರು ದೇಶದಲ್ಲಿರುವ ವಿವಿಧ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ದೇಶದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಆಗುತ್ತಿದ್ದು, ಉತ್ತಮ ಆದಾಯದ ಜೊತೆಯಲ್ಲಿ ಅಗ್ಗದ ಪ್ರವಾಸಿ ಪ್ಯಾಕೇಜ್‌ಗಳಿಂದಾಗಿ ಜನ ಪ್ರವಾಸದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಹಿಮಾಚಲ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್, ನಿರ್ದೇಶಕ ಬಿ.ರಾಮು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News