ಜು.29 ರಿಂದ ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವ

Update: 2018-07-27 13:59 GMT

ಬೆಂಗಳೂರು, ಜು.27: ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಾನಪದ ಪರಿಷತ್ತು ಹಾಗೂ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘ ಮತ್ತು ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಂಟಿಯಾಗಿ ಜು.29 ಹಾಗೂ 30 ರಂದು ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವವನ್ನು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ, ಜಗತ್ತಿನ ಬಹುತೇಕ ಪ್ರಾಚೀನ ಸಂಸ್ಕೃತಿಗಳಲ್ಲಿ ಸಾಂಸ್ಕೃತಿಕ ಘಟಕವಾಗಿ ಉಳಿದುಕೊಂಡಿರುವ ಗಾಳಿಪಟ ಹಾರಿಸುವ ಆಧುನಿಕ ಕಲೆ ನಶಿಸಿಬಾರದು ಎಂಬ ಉದ್ದೇಶದಿಂದ, ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸಬೇಕೆಂಬ ಆಶಯದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಾಲಿನ ಉತ್ಸವವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದ ಎನ್.ಮುನಿನಂಜಪ್ಪ ಅವರ ಜಮೀನಿನಲ್ಲಿ ನಡೆಯಲಿದೆ. ಜು.29 ರಂದು ರಾಷ್ಟ್ರ ಮಟ್ಟದ ಉತ್ಸವ ನಡೆಯಲಿದ್ದು, ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವ ಕಲಾವಿದರಿಂದ ವಿಶಿಷ್ಟ ವಿನ್ಯಾಸದ ಗಾಳಿಪಟ ಪ್ರದರ್ಶನ ನಡೆಯುತ್ತದೆ. ಜು.30 ರಂದು ಕರ್ನಾಟಕದ ವಿವಿಧ ರಾಜ್ಯಗಳಿಂದ ಆಗಮಿಸುವ ಕಲಾವಿದರು ತಮ್ಮ ವಿಭಿನ್ನ ವಿನ್ಯಾಸದ ಗಾಳಿಪಟ ಹಾರಿಸಲಿದ್ದಾರೆ. ಇದೇ ಮೊದಲ ಬಾರಿಗೆ ರಾತ್ರಿ 7 ರಿಂದ 8 ಗಂಟೆವರೆಗೂ ಎಲ್‌ಇಡಿ ಬೆಳಕಿನಿಂದ ಕೂಡಿದ ಗಾಳಿಪಟಗಳ ಹಾರಾಟ ಪ್ರದರ್ಶನವಿರುತ್ತದೆ. ಉತ್ಸವದಲ್ಲಿ ಅತ್ಯುತ್ತಮ ಗಾಳಿಪಟ ಹಾರಿಸಿದವರಿಗೆ ಪರಿಷತ್ತಿನಿಂದ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಮೂರು ವಿಭಾಗಗಳಿದ್ದು, ಅದರಲ್ಲಿ ಮೊದಲನೇ ವಿಭಾಗದಲ್ಲಿ 12 ವರ್ಷದೊಳಗಿನ ಕಿರಿಯರು, ಎರಡನೆ ವಿಭಾಗ 13 ವರ್ಷದಿಂದ 21 ವರ್ಷದವರು, ಮೂರನೆ ವಿಭಾಗದಲ್ಲಿ 22 ವರ್ಷ ಮೇಲ್ಪಟ್ಟವರು ಹಾಗೂ ನಾಲ್ಕನೆ ವಿಭಾಗದಲ್ಲಿ 23 ವರ್ಷ ಮೇಲ್ಪಟ್ಟ ಹಿರಿಯರು ಪಾಲ್ಗೊಳ್ಳಬಹುದಾಗಿದೆ. ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಪ್ರತಿ ವಿಭಾಗಕ್ಕೂ ಎರಡೆರಡು ಸಮಾಧಾನಕರ ಬಹುಮಾನಗಳಿರುತ್ತವೆ. ಉತ್ಸವದಲ್ಲಿ ಭಾಗವಹಿಸುವವರು ಜು.30 ರಂದು ಸ್ಥಳದಲ್ಲಿಯೇ ಬೆ.11 ರವರೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 99866 11135, 92426 94566, 97390 05566 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಉತ್ಸವದ ಉದ್ಘಾಟನೆಯನ್ನು ಪ್ರವಾಸೋದ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್ ನೆರವೇರಿಸಲಿದ್ದು, ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News