ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹ: ಆ.2 ರಂದು ವಿಧಾನಸೌಧ ಮುತ್ತಿಗೆ

Update: 2018-07-27 14:23 GMT

ಬೆಂಗಳೂರು, ಜು.27: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಆ.2ರಂದು ವಿಧಾನಸೌಧ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗವು ಕಳೆದ 60 ವರ್ಷಗಳಿಂದ ಸಮಗ್ರ ಅಭಿವೃದ್ಧಿಯಾಗದೆ ತೀರ ಹಿಂದುಳಿದಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಸಮಗ್ರವಾಗಿ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈದರಾಬಾದ್ ಭಾಗಕ್ಕೂ ಅನ್ಯಾಯವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಬೇಕು. ಶ್ವೇತ ಪತ್ರ ಚರ್ಚೆಗೆ ಸುವರ್ಣ ಸೌಧದಲ್ಲಿ ಕನಿಷ್ಠ 15 ದಿನಗಳ ಕಾಲ ವಿಶೇಷ ಅಧಿವೇಶನ ಕರೆಯಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಗ್ಗೆ ಸಮಗ್ರವಾದ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರತ್ಯೇಕ ರಾಜ್ಯ ಮಾಡುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಪ್ರತ್ಯೇಕ ರಾಜ್ಯದ ಕೂಗನ್ನು ಯಾರೂ ಎತ್ತಬಾರದು. ಸರಕಾರವೂ ನಿರ್ಲಕ್ಷ್ಯ ವಹಿಸದೆ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೂ ಆ ಭಾಗದ ಜನರು, ಶಾಸಕರು, ಮಂತ್ರಿಗಳು ಧ್ವನಿ ಎತ್ತಿಲ್ಲ. ಆ ಭಾಗದ ಜನರಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಉತ್ತರ ಭಾಗಕ್ಕೆ ಆಗಿರುವ ಅನ್ಯಾಯವನ್ನು ನಾವು ವಿರೋಧಿಸುತ್ತೇವೆ. ಅದಕ್ಕಾಗಿ ಸರಕಾರದ ಮೇಲೆ ಒತ್ತಡ ತರಲು ಎಲ್ಲಾ ಕನ್ನಡಪರ ಸಂಘಟನೆಗಳು ಸಭೆ ಸೇರಿ ಪ್ರತಿಭಟನೆ ಬಗ್ಗೆ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಅವರು ಹೇಳಿದರು.

ಆ.20 ರೊಳಗೆ ಮಹದಾಯಿ ವಿಚಾರವಾಗಿ ನ್ಯಾಯಾಧೀಕರಣ ತೀರ್ಪು ಬರಲಿದೆ. ಗೋವಾ ರಾಜ್ಯದ ರಾಜಕಾರಣಿಗಳು, ಗೋವಾ ಸರಕಾರ ಗೋಡೆ ಒಡೆದು ನೀರನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಸುದ್ದಿಗೊಷ್ಠಿಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರವೀಣ್‌ ಕುಮಾರ್ ಶೆಟ್ಟಿ, ಕೆ.ಆರ್.ಕುಮಾರ್, ಮಂಜುನಾಥ್ ದೇವ್ ಉಪಸ್ಥಿತರಿದ್ದರು.

ರಾಜ್ಯ ಸರಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದ ಮಾತ್ರಕ್ಕೆ ಕರ್ನಾಟಕವನ್ನು ಎರಡು ಭಾಗವನ್ನಾಗಿ ಮಾಡಿ ಎನ್ನುವುದು ಸರಿಯಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎನ್ನುವುದು ಎಷ್ಟು ಸರಿ. ಪ್ರತ್ಯೇಕ ರಾಜ್ಯ ಕನಸಿನ ಮಾತು. ಕರ್ನಾಟಕ ಏಕೀಕರಣಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಹೀಗಾಗಿ, ರಾಜ್ಯವನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಲು ಬಿಡುವುದಿಲ್ಲ.
-ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News