ನವೀನ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ: ಆರ್.ವಿ.ದೇಶಪಾಂಡೆ

Update: 2018-07-27 14:26 GMT

ಬೆಂಗಳೂರು, ಜು.27: ನವೀನ ತಂತ್ರಜ್ಞಾನಕ್ಕೆ ಹೊಂದಿಕೊಂಡಂತೆ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಈ ಉದ್ಯೋಗಗಳನ್ನು ಯಶಸ್ವಿಯಾಗಿ ನಿಭಾಯಿಸಲು ಯುವ ಜನತೆಯನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ನುಡಿದರು.

ಶುಕ್ರವಾರ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಎರ್ಸಿಕಾ-2018 ಕಂಪ್ಯೂಟಿಂಗ್, ಮಾಹಿತಿ, ಸಂವಹನ ಹಾಗೂ ಅನ್ವಯಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನವೀನ ಶೋಧಗಳನ್ನು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಮಾಡುತ್ತಿದ್ದ ಶ್ರಮದಾಯಕ ಕೆಲಸಗಳನ್ನು ರೋಬೋಟ್‌ಗಳು ನಿರ್ವಹಿಸುತ್ತಿರುವುದರಿಂದ ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಮಾಯವಾಗುತ್ತಿವೆ. ಆದರೆ, ಇದಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ. ಇಂದಿನ ಆಧುನಿಕ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲವಾದ ಉದ್ಯೋಗಾವಕಾಶಗಳಿವೆ. ಹೀಗಾಗಿ ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೌಶಲ್ಯವನ್ನು ಪಡೆಯುವ ನಿಟ್ಟಿನಲ್ಲಿ ಯುವಜನತೆ ಆಸಕ್ತಿ ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಮಾತನಾಡಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿರುವ ಈ ಅಂತಾರಾಷ್ಟ್ರೀಯ ಸಮ್ಮೇಳನ ಅತ್ಯಾಧುನಿಕ ಜ್ಞಾನದ ಪರಸ್ಪರ ವಿನಿಮಯಕ್ಕೆ ಸೂಕ್ತ ವೇದಿಕೆಯಾಗಿದೆ. ನಗರದಲ್ಲಿ ಇಂತಹ ಸಮ್ಮೇಳನಗಳು ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸಿದರು.

ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್, ಮಾಹಿತಿ ತಂತ್ರಜ್ಞ ಡಾ.ಗುರ್‌ಸಿಮ್ರನ್ ಸಿಂಗ್ ವಾಲಿಯಾ, ಡಾ.ಕಾಳಿದಾಸ ಶೆಟ್ಟಿ ಮತ್ತು ಪ್ರೊ.ಅಲೆಕ್ಸ್ ರೇಡರ್‌ಮಾಚರ್ ಉಪಸ್ಥಿತರಿದ್ದರು. ವಿಶ್ವದ ಹಲವು ದೇಶಗಳ ತಂತ್ರಜ್ಞರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News