ತೆಲಂಗಾಣ ನಕಲಿ ಪೊಲೀಸ್ ಅಧಿಕಾರಿ ಸೆರೆ

Update: 2018-07-27 14:43 GMT

ಬೆಂಗಳೂರು, ಜು.27: ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆಯ ನಕಲಿ ಪೊಲೀಸ್ ಅಧಿಕಾರಿಯೊಬ್ಬನನ್ನು ಇಲ್ಲಿನ ಬಸವನಗುಡಿ ಠಾಣಾ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಬಳಿಯ ಕಾರು ಮೈಕಾನಿಕ್ ಅಂಗಡಿ ಮಾಲಕ ಅಬ್ದುಲ್ ಮುಬಾರಕ್ ಯಾನೆ ವಿನಯ್ ಕುಮಾರ್(40) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿದ್ದು ಹೇಗೆ?: ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವಾಗ ಸಮವಸ್ತ್ರದಲ್ಲಿರುವ ಪೊಲೀಸ್ ಗುರುತಿನ ಚೀಟಿ ತೋರಿಸಿ ಮಹಿಳೆಯ ಜೊತೆ ಸಲುಗೆ ಬೆಳೆಸಿ ಅವರನ್ನು ಮದುವೆಯಾಗುವುದಾಗಿ ನಂಬಿಸಿ, ತಮ್ಮ ಮದುವೆಗಾಗಿ ಫೆ.10ರಂದು ಬಸವನಗುಡಿ ಡಿವಿಜಿ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಯಲ್ಲಿ ಆಭರಣ ನೋಡುವ ನೆಪದಲ್ಲಿ ಒಂದು ಚಿನ್ನದ ಸರ, ದುಬಾರಿ ಬೆಲೆಯ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದನು ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಪೊಲೀಸರು ಅಂಗಡಿಯಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ಮುಂಬೈ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News