ಧರಂಸಿಂಗ್ ದೇಶ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ: ಈಶ್ವರ್ ಖಂಡ್ರೆ

Update: 2018-07-27 14:45 GMT

ಬೆಂಗಳೂರು, ಜು.27: ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಈ ರಾಜ್ಯ ಹಾಗೂ ದೇಶ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ, ಅವರು ನಮ್ಮನ್ನು ಅಗಲಿ ಒಂದು ವರ್ಷವಾಯಿತು ಎಂದು ನಂಬಲು ಕಷ್ಟವಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಧರಂಸಿಂಗ್ ಅವರ ಪುತ್ರ ವಿಧಾನಪರಿಷತ್ ಸದಸ್ಯ ವಿಜಯ್‌ಸಿಂಗ್‌ಗೆ ಪತ್ರ ಬರೆದಿರುವ ಅವರು, ಅತ್ಯಂತ ಸಹೃದಯಿ ಸರಳತೆ, ಸಜ್ಜನಿಕೆಗೆ ಹೆಸರಾದ ಧರಂಸಿಂಗ್, ಅಜಾತಶತ್ರುವೆಂದು ಖ್ಯಾತಿ ಪಡೆದುಕೊಂಡವರು. ಇಂತಹ ಧೀಮಂತ ರಾಜಕಾರಣಿ ಕಾಂಗ್ರೆಸ್ ಪಕ್ಷದವರು ಎಂದು ಹೇಳಲು ಅತ್ಯಂತ ಹೆಮ್ಮೆ ಎನಿಸುತ್ತಿದೆ. ಪ್ರತಿಪಕ್ಷದವರೊಂದಿಗೆ ಸೌಹಾರ್ದ ಸ್ನೇಹ ಇಟ್ಟುಕೊಂಡಿದ್ದರೂ ಯಾವಾಗಲೂ ಪಕ್ಷ ನಿಷ್ಠರಾಗಿದ್ದರು ಎಂದು ಹೇಳಿದ್ದಾರೆ.

ಹಿಂದುಳಿದ ಪ್ರದೇಶವಾದ ಹೈದರಾಬಾದ್-ಕರ್ನಾಟಕದ ಬಗ್ಗೆ ಅದರಲ್ಲಿಯೂ ವಿಶೇಷವಾಗಿ ಬೀದರ್ ಜಿಲ್ಲೆಯ ಬಗ್ಗೆ ಅವರಿಗೆ ಹೆಚ್ಚಿನ ಕಳಕಳಿಯಿತ್ತು. ಅನೇಕ ಬಾರಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ವಿವಿಧ ಇಲಾಖೆಗಳ ಸಚಿವರಾಗಿ, ಪ್ರತಿಪಕ್ಷ ನಾಯಕರಾಗಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮತ್ತು ಮುಖ್ಯಮಂತ್ರಿಯಾಗಿ ಎಲ್ಲ ಹುದ್ದೆಗಳನ್ನು ಬಹಳ ಸಮರ್ಥವಾಗಿ ಧರಂ ಸಿಂಗ್ ನಿಭಾಯಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಧರಂಸಿಂಗ್ ಅಧಿಕಾರಾವಧಿಯಲ್ಲಿ ಬೀದರ್ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಪಶು ವಿದ್ಯಾಲಯ, ಬೀದರ್-ಶ್ರೀರಂಗಪಟ್ಟಣದ ಹೆದ್ದಾರಿ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೈಕೋರ್ಟ್ ಪೀಠ ಮಂಜೂರು ಹಾಗೂ ಬೀದರ್ ಇಂಟರ್‌ಸಿಟಿ ರೈಲು ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದರು. ಹೈದರಾಬಾದ್ ಕರ್ನಾಟಕಕ್ಕೆ 371ಜೆ ಅನುಷ್ಠಾನ ತರಲು ಮಲ್ಲಿಕಾರ್ಜುನ್ ಖರ್ಗೆ ಮತ್ತು ಇತರ ಮುಖಂಡರ ಜೊತೆ ಹೋರಾಟ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದ್ದರು ಎಂದು ಈಶ್ವರ್ ಖಂಡ್ರೆ ಸ್ಮರಿಸಿದ್ದಾರೆ.

ಸಹಿಷ್ಣುತೆ, ವಿಶಾಲ ದೃಷ್ಟಿಕೋನ, ಸರಳತೆ, ಕಾರ್ಯಕರ್ತರನ್ನು ಸಂಪರ್ಕದಲ್ಲಿಟ್ಟುಕೊಳ್ಳುವುದು ಹಾಗೂ ಇನ್ನೂ ಅನೇಕ ವಿಚಾರಗಳನ್ನು ಅವರಿಂದ ನಾನು ಕಲಿತಿದ್ದೇನೆ. ಅವರು ನನ್ನ ಮಾರ್ಗದರ್ಶಕರಾಗಿದ್ದರು. ನನಗೆ ಪಕ್ಷದಲ್ಲಿ, ಸರಕಾರದಲ್ಲಿ ಬೆಳೆಯಲು ಉನ್ನತ ಹುದ್ದೆ ಪ್ರಾಪ್ತಿಯಾಗಲು ಅವರ ಕೊಡುಗೆಯಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News