ಊಟಕ್ಕೆ ಹೆಚ್ಚಿನ ದರ ಬೇಡಿಕೆ: ಇಸ್ಕಾನ್ ಊಟ ಬೇಡವೆಂದ ಬಿಬಿಎಂಪಿ
ಬೆಂಗಳೂರು, ಜು.27: ಊಟಕ್ಕೆ ಹೆಚ್ಚಿನ ದರ ನೀಡುವಂತೆ ಇಸ್ಕಾನ್ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ, ಇಸ್ಕಾನ್ ಸಂಸ್ಥೆ ಪೂರೈಸುವ ಊಟವನ್ನು ನಿಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಇಸ್ಕಾನ್ ಸಂಸ್ಥೆ ಮಧ್ಯಾಹ್ನ ಬಿಸಿಯೂಟದ ದರ ಹೆಚ್ಚಿಸುವಂತೆ ತಿಳಿಸಿದೆ. ಆದರೆ, ಪಾಲಿಕೆ ದರ ಹೆಚ್ಚಿಸಲು ಒಪ್ಪದ ಹಿನ್ನೆಲೆಯಲ್ಲಿ ಆಹಾರ ಪೂರೈಸುವುದಿಲ್ಲವೆಂದು ಲಿಖಿತ ರೂಪದಲ್ಲಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆದಾರರ ಮೂಲಕ ಪೂರೈಸಲಾಗುವುದು ಎಂದು ಮಾಹಿತಿ ನೀಡಿದರು. ಬಿಬಿಎಂಪಿ ಮತ್ತು ಇಸ್ಕಾನ್ ನಡುವೆ ಪ್ರತಿ ಪೌರಕಾರ್ಮಿಕನಿಗೆ 20 ರೂ.ಗಳಿಗೆ ಊಟ ಪೂರೈಸುವ ಕುರಿತು ಒಪ್ಪಂದವಾಗಿತ್ತು. ಜುಲೈ ಅಂತ್ಯಕ್ಕೆ ಇಸ್ಕಾನ್ ಜತೆಗಿನ ಒಪ್ಪಂದ ಮುಕ್ತಾಯವಾಗಲಿದ್ದು, ಇನ್ನು ಮುಂದೆ ಪ್ರತಿ ಊಟಕ್ಕೆ 24 ರೂ.ನೀಡಿದರೆ ಮಾತ್ರ ಆಹಾರ ಪೂರೈಕೆ ಮಾಡುವುದಾಗಿ ತಿಳಿಸಿದೆ.
ಪಾಲಿಕೆಯಿಂದ ಅಷ್ಟು ಹಣ ನೀಡಲು ಸಾಧ್ಯವಿಲ್ಲವೆಂದು ಹೇಳಿದ್ದು, ಅದೇ ಹಳೆಯ ದರ 20 ರೂ.ಗಳಿಗೆ ಇಂದಿರಾ ಕ್ಯಾಂಟೀನ್‌ನಿಂದ ಅವರಿಗೆ ಆಹಾರ ಪೂರೈಸಲು ಗುತ್ತಿಗೆದಾರರು ಒಪ್ಪಿದ್ದಾರೆ. ಅದರಂತೆ ಮಸ್ಟರಿಂಗ್ ಕೇಂದ್ರಗಳಿಗೆ ಆಹಾರ ತಲುಪಿಸಲಾಗುವುದು ಎಂದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಇತರೆ ಸಂಸ್ಥೆಗಳು ನಡೆಸಿದ ‘ಟೈಮ್ ಅಂಡ್ ಮೋಷನ್’ ಅಧ್ಯಯನದಂತೆ ಅರ್ಧ ಕಿಲೋ ಮೀಟರ್‌ನ್ನು ಒಬ್ಬ ಪೌರಕಾರ್ಮಿಕರ ಗುಡಿಸಲು ಸಾಧ್ಯ. ಅದರಂತೆ ವಾರ್ಡ್ ರಸ್ತೆಗಳ ಮ್ಯಾಪಿಂಗ್ ಕಾರ್ಯ ನಡೆಯುತ್ತಿದ್ದು, ಈಗಾಗಲೇ 181 ವಾರ್ಡ್‌ಗಳ ರಸ್ತೆಗಳಲ್ಲಿ ಯಾರು ಕಸ ಗುಡಿಸಬೇಕು ಎಂಬುದನ್ನು ಮ್ಯಾಪಿಂಗ್ ಮಾಡಲಾಗಿದೆ.
198 ವಾರ್ಡ್‌ಗಳು ಪೂರ್ಣಗೊಂಡ ನಂತರದಲ್ಲಿ ಎಷ್ಟು ಜನ ಪೌರಕಾರ್ಮಿಕರು ಬೇಕಾಗುತ್ತದೆ ಎಂಬುದು ತಿಳಿಯಲಿದ್ದು, ಪ್ರಮುಖ ರಸ್ತೆಗಳ ಸ್ವಚ್ಛತೆಗೆ 34 ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಆ.1 ರಿಂದ ‘ಇಂದಿರಾ ಕ್ಯಾಂಟಿನ್’ಗಳಿಂದಲೇ ಮಧ್ಯಾಹ್ನದ ಬಿಸಿಯೂಟ ಪೂರೈಸಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.