ಸಾಮಾಜಿಕ ಜಾಲತಾಣದಲ್ಲಿ ಹನನ್ ಅವಹೇಳನ ಮಾಡಿದಾತನ ಬಂಧನ

Update: 2018-07-28 08:46 GMT

ಕೊಚ್ಚಿ, ಜು.28: ಬದುಕುವುದಕ್ಕಾಗಿ ಮೀನು ಮಾರಾಟ ಮಾಡುತ್ತಿರುವ ತ್ರಿಶೂರಿನ ವಿದ್ಯಾರ್ಥಿನಿ ಹನನ್‍ ಳನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಹನನ್ ವಿರುದ್ಧ ಫೇಸ್‍ ಬುಕ್ ನಲ್ಲಿ ವಯನಾಡಿನ ನೂರುದ್ದೀನ್ ಶೇಖ್ ಎಂಬಾತ ಮೊದಲು ಪೋಸ್ಟ್ ಹಾಕಿದ್ದ. ಈತನನ್ನು ಪೊಲೀಸರು ಬಂಧಿಸಿದ್ದು, ಐಟಿ ಕಾನೂನಡಿಯಲ್ಲಿ  ಜಾಮೀನುರಹಿತ ಕೇಸು ದಾಖಲಿಸಿಕೊಳ್ಳಲಾಗಿದೆ.

ಸಿನೆಮಾ ಪ್ರಚಾರಕ್ಕಾಗಿ ಹನನ್ ನಾಟಕವಾಡುತ್ತಿದ್ದಾಳೆ ಎಂದು ನೂರುದ್ದೀನ್ ಶೇಖ್ ಫೇಸ್‍ ಬುಕ್ ಪೋಸ್ಟ್‍ ನಲ್ಲಿ ಆರೋಪಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಕಾಮೆಂಟ್ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಕೆ. ಲಾಲ್‍ ಜಿ ಹೇಳಿದರು.

ಹನನ್‍ಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಮಾನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕೇಸು ದಾಖಲಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಡಿಜಿಪಿಗೆ ಆದೇಶ ನೀಡಿದ್ದರು. ನಂತರ ಪೊಲೀಸರು ನೂರುದ್ದೀನ್‍ ನನ್ನು ಬಂಧಿಸಿದ್ದಾರೆ. ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕೂಡಾ ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದೆ.

ತೊಡುಪುಳದ ಅಲ್ ಅಝ್ಹರ್ ಕಾಲೇಜಿನಲ್ಲಿ ಹನನ್ ಶಿಕ್ಷಣ ಪಡೆಯುತ್ತಿದ್ದಾಳೆ. ಕಾಲೇಜಿನಿಂದ ಬಂದ ಬಳಿಕ ಆಕೆ ಮೀನು ಮಾರಾಟ ಮಾಡುತ್ತಿದ್ದಾಳೆ. ಈಕೆಯ ಸುದ್ದಿ ವೈರಲ್ ಆದ ಬಳಿಕ ನಿರ್ದೇಶಕ ಅರುಣ್ ಗೋಪಿ ಹನನ್‍ ಳಿಗೆ ಸಿನೆಮಾದಲ್ಲಿ ಅವಕಾಶ ನೀಡಿದ್ದಾರೆ. ಈ ಬಗ್ಗೆ ಕೆಲವರು ಹನನ್ ಸಿನೆಮಾಕ್ಕಾಗಿ ನಾಟಕವಾಡುತ್ತಿದ್ದಾಳೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News