ರಾಜ್ಯ ವಿಭಜನೆ ಕುರಿತು ಮಾತನಾಡುವವರು ಮೂರ್ಖರು: ಸಿದ್ದರಾಮಯ್ಯ
ಬೆಂಗಳೂರು, ಜು.28: ಕರ್ನಾಟಕವನ್ನು ವಿಭಜಿಸುವ ಕುರಿತು ಮಾತನಾಡುವವರು ಮೂರ್ಖರು. ಅಂತವರಿಗೆ ರಾಜ್ಯದ ಏಕೀಕರಣ ಚಳವಳಿಯ ಮಹತ್ವ ಗೊತ್ತಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದರು.
ಶನಿವಾರ ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮುಂಚೂಣಿ ಘಟಕಗಳ ಮಾಜಿ ಪದಾಧಿಕಾರಿಗಳ ಒಕ್ಕೂಟ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ಮತ್ತಷ್ಟು ಚರ್ಚೆಯಾಗಲಿ. ಆದರೆ, ರಾಜ್ಯದ ವಿಭಜನೆ ಮಾತು ಯಾರಿಂದಲೂ ಬರಬಾರದು ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರದಲ್ಲಿ ಕನ್ನಡ ಏಕೀಕರಣ ಚಳವಳಿ ನಡೆಯಿತು. ಆ ಸಂದರ್ಭದಲ್ಲಿ ಸಾಹಿತಿಗಳು, ಹೋರಾಟಗಾರರು ಹಾಗೂ ರಾಜಕೀಯ ಮುಖಂಡರ ಅವಿರತ ಹೋರಾಟದ ಫಲವಾಗಿ ಕನ್ನಡ ಭಾಷೆಯನ್ನಾಡುವ ಹಾಗೂ ತನ್ನದೆ ಆದ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶಗಳು ಒಗ್ಗೂಡಿ, ಕನ್ನಡ ಏಕೀಕರಣವಾಯಿತು. ಈ ಇತಿಹಾಸದ ಬಗ್ಗೆ ಗೊತ್ತಿಲ್ಲದವರು ವಿಭಜನೆಯ ಕುರಿತು ಮಾತನಾಡುತ್ತಿದ್ದಾರೆ. ಇದು ಸರಿಯಲ್ಲವೆಂದು ಅಭಿಪ್ರಾಯಿಸಿದರು.
ರಾಜ್ಯದ ವಿಭಜನೆಯ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ಶ್ರೀರಾಮುಲುಗೆ ಕನ್ನಡದ ಏಕೀಕರಣದ ಇತಿಹಾಸ ಗೊತ್ತಿಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ರಾಜ್ಯಕ್ಕೆ ಅಪಚಾರ ಎಸಗುವಂತಹ ಕೆಲಸ ಮಾಡಬಾರದು. ಇಂತಹ ಹೇಳಿಕೆಗಳನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಅವರು ಹೇಳಿದರು.