ವಿದ್ಯುತ್‌ ಚಾಲಿತ ಆಟೋಗಳಿಗೆ ಶೀಘ್ರ ಪರವಾನಿಗೆ: ಸಚಿವ ತಮ್ಮಣ್ಣ ಭರವಸೆ

Update: 2018-07-28 14:06 GMT

ಬೆಂಗಳೂರು, ಜು.28: ಪೆಟ್ರೋಲ್, ಡೀಸೆಲ್ ಸಹಾಯದಿಂದ ಚಲಿಸುವ ಆಟೋರಿಕ್ಷಾಗಳ ಬದಲಿಗೆ ವಿದ್ಯುತ್ ಚಾಲಿತ ಆಟೋ ರಿಕ್ಷಾಗಳನ್ನು ಬಳಕೆ ಮಾಡಲು ಮುಂದಾದರೆ ತಕ್ಷಣ ಪರವಾನಿಗೆ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಯೂನಿಯನ್ ವತಿಯಿಂದ ಆಯೋಜಿಸಿದ್ದ ಚಾಲಕ ದಿನಾಚರಣೆ ಹಾಗೂ ಸಾರಥಿ ನಂ.1 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ 4 ಸಾವಿರಕ್ಕೂ ಅಧಿಕ ಜನರು ಮಾಲಿನ್ಯದಿಂದ ಮೃತಪಟ್ಟಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.

ನಗರವನ್ನು ಮಾಲಿನ್ಯ ಮುಕ್ತ ಮಾಡುವ ಉದ್ದೇಶದಿಂದ ಎಲೆಕ್ಟ್ರಿಕಲ್ ಆಟೋಗಳಿಗೆ ಉತ್ತೇಜನ ನೀಡಲು ಮುಂದಾಗಿದ್ದೇವೆ. ಪೆಟ್ರೋಲ್, ಡೀಸೆಲ್ ಆಟೋಗಳಿಗೆ ಅನುಮತಿ ನೀಡಬೇಕೆ, ಬೇಡವೆ ಎನ್ನುವುದು ಚರ್ಚೆಯ ಹಂತದಲ್ಲಿದೆ. ಹೀಗಾಗಿ, ಎಲೆಕ್ಟ್ರಿಕ್ ಆಟೋಗಳನ್ನು ಬಳಸಲು ಮುಂದಾದರೆ ಈಗ ಬೇಡಿಕೆಯಿರುವ 30 ಸಾವಿರ ಅರ್ಜಿಯೊಂದಿಗೆ ಹೆಚ್ಚುವರಿಯಾಗಿ ತಕ್ಷಣ ಪರವಾನಿಗೆ ನೀಡಲು ಸರಕಾರ ಸಿದ್ಧವಿದೆ ಎಂದು ತಿಳಿಸಿದರು. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸಾರಿಗೆ ಹಾಗೂ ಮೆಟ್ರೋ ವ್ಯವಸ್ಥೆಯನ್ನು ಹೆಚ್ಚಳ ಮಾಡುವಂತೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೆಟ್ರೋ ಹಾಗೂ ವಿದ್ಯುತ್ ಆಧಾರಿತ ಸಾರಿಗೆ ವ್ಯವಸ್ಥೆ ಬಲಪಡಿಸಲು ಉದ್ದೇಶಿಸಲಾಗಿದೆ. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಈ ನಷ್ಟ ಸರಿದೂಗಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರದಲ್ಲಿನ ಮಾಲಿನ್ಯ ನಿಯಂತ್ರಣಕ್ಕಾಗಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ವಾರ್ಡ್ ಮಟ್ಟದಲ್ಲಿ ಸ್ಥಳೀಯ ಶಾಸಕ ಹಾಗೂ ಪಾಲಿಕೆ ಸದಸ್ಯರ ಸಹಯೋಗದೊಂದಿಗೆ ಸಮಿತಿ ಮಾಡಲಾಗಿದೆ. ಈ ಸಮಿತಿಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸ್ವಂತ ವಾಹನ ಬಳಕೆ ಕಡಿಮೆ ಮಾಡುವಂತೆ ಹಾಗೂ ಸಾರಿಗೆ ಸಂಸ್ಥೆ ವಾಹನಗಳನ್ನು ಹೆಚ್ಚು ಬಳಕೆ ಮಾಡುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಸಾರಿಗೆ ಇಲಾಖೆಯಲ್ಲಿ ಶೇ.90 ರಷ್ಟು ಕನ್ನಡಿಗರಿಗೆ ಉದ್ಯೋಗ ಒದಗಿಸಲಾಗಿದೆ. 1.20 ಲಕ್ಷ ನೌಕರರು ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಈ ಕುಟುಂಬಗಳು ಸಾರಿಗೆ ಸಂಸ್ಥೆಯ ಉದ್ಯೋಗವನ್ನೇ ಅವಲಂಬಿಸಿವೆ. ಚಾಲಕರ ಹುದ್ದೆ ಕಷ್ಟಕರವಾಗಿದ್ದು, ಅಧಿಕಾರಿಗಳು ಅವರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಆದೇಶ ನೀಡಿದ್ದೇವೆ ಎಂದು ತಿಳಿದರು.

ಕಾರ್ಯಕ್ರಮದಲ್ಲಿ 54 ಜನ ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಮಹಿಳಾ ಚಾಲಕಿ ಉಮಾ ಎಂಬುವವರಿಗೆ ಚಿನ್ನದ ಪದಕ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ರಾಜ್ಯಾಧ್ಯಕ್ಷ ಎಂ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News