ಸರಕಾರದ ಒಡೆದು ಆಳುವ ನೀತಿ ಖಂಡಿಸಿ ಆ.9 ರಿಂದ ಬಿಜೆಪಿಯಿಂದ ರಾಜ್ಯ ಪ್ರವಾಸ: ಯಡಿಯೂರಪ್ಪ

Update: 2018-07-28 14:29 GMT

ಬೆಂಗಳೂರು, ಜು. 28: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಒಡೆದು ಆಳುವ ನೀತಿ ಖಂಡಿಸಿ ಹಾಗೂ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಆಗಸ್ಟ್ 9ರಿಂದ ಬಿಜೆಪಿ ಮೂರು ತಂಡಗಳು ರಾಜ್ಯ ಪ್ರವಾಸ ಕೈಗೊಳ್ಳಲಿವೆ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ನಗರದ ಹೊರ ವಲಯದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 9 ‘ಕ್ರಾಂತಿ ದಿನ’. ಹೀಗಾಗಿ ಅದೇ ದಿನ ಬಿಜೆಪಿ ಪ್ರವಾಸ ಆರಂಭವಾಗಲಿದೆ. ನನ್ನ ನೇತೃತ್ವದಲ್ಲಿ ಒಂದು ತಂಡ, ಆರ್. ಅಶೋಕ್, ಲಿಂಬಾವಳಿ, ಶೆಟ್ಟರ್ ನೇತೃತ್ವದಲ್ಲಿ ಎರಡನೆ ತಂಡ ಹಾಗೂ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ನೇತೃತ್ವದಲ್ಲಿ ಮೂರನೆ ತಂಡ ಪ್ರವಾಸ ಮಾಡಲಿದೆ ಎಂದರು.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಮಾನದಂಡ ಅನುಸರಿಸಲಿದ್ದು, ಅಭ್ಯರ್ಥಿಗಳ ಕ್ಷೇತ್ರ ಬದಲಾವಣೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಸಂಸತ್ ಅಧಿವೇಶನದ ಬಳಿಕ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಸ್ಪರ್ಧಿಸಲಿದೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಹಾಗೂ ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಯೋಜನೆಗಳ ಆಧಾರದ ಮೇಲೆ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 22ರಿಂದ 23 ಲೋಕಸಭೆ ಸ್ಥಾನಗಳನ್ನುನಿಶ್ಚಿತವಾಗಿಯೂ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸಾಲಮನ್ನಾಕ್ಕೆ ಆಗ್ರಹಿಸಿ ಹೋರಾಟ ಮಾಡುವುದಿಲ್ಲ. ಆದರೆ, ಇದೀಗ ಘೋಷಿಸಿರುವ ಸಾಲಮನ್ನಾ ಆಗಬೇಕೆಂಬುದು ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಲು ಆಗ್ರಹಿಸಿ ಚಳವಳಿ ಮಾಡುತ್ತೇವೆ. ವಿಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ಆದರೆ, ಕಾಂಗ್ರೆಸ್-ಜೆಡಿಎಸ್‌ನವರೆ ಕಚ್ಚಾಟ ಮಾಡಿಕೊಂಡು ಸರಕಾರ ಉರುಳಿದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಧರಣಿ ಎಚ್ಚರಿಕೆ
ವಿಧಾನಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಸರಿಯಲ್ಲ. ಅವರಿಗೆ ಮುಕ್ತ ಅವಕಾಶ ನೀಡಬೇಕು. ಇಲ್ಲವಾದರೆ ಶಾಸಕರೊಂದಿಗೆ ಧರಣಿ ನಡೆಸಬೇಕಾಗುತ್ತದೆ. ಸರ್ವಾಧಿಕಾರಿ ಧೋರಣೆ ಸಲ್ಲ. ಅಕ್ರಮ ಬೆಳಕಿಗೆ ಬರುವ ಆತಂಕದಿಂದ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News