‘ಚಾಲ್ತಿ ಸಾಲ ಮನ್ನಾ’ 20 ಲಕ್ಷ ರೈತರಿಗೆ ಅನುಕೂಲ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-07-28 14:34 GMT

ಬೆಂಗಳೂರು, ಜು.28: ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎರಡು ಲಕ್ಷ ರೂ.ವರೆಗಿನ 148 ಕೋಟಿ ರೂ.ಸುಸ್ತಿ ಸಾಲ ಹಾಗೂ ಒಂದು ಲಕ್ಷ ರೂ.ವರೆಗಿನ 9,448 ಕೋಟಿ ರೂ.ಗಳ ಚಾಲ್ತಿ ಸಾಲ ಮನ್ನಾ ಮಾಡಿರುವುದರಿಂದ 20 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಸಹಕಾರ ಬ್ಯಾಂಕುಗಳಲ್ಲಿನ 8,165 ಕೋಟಿ ರೂ.ಸಾಲವನ್ನು ಮನ್ನಾ ಮಾಡಿದ್ದರು. ಈ ಪೈಕಿ 4,971 ಕೋಟಿ ರೂ.ಮನ್ನಾ ಆಗಿತ್ತು. ಈಗ ಮತ್ತೆ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು. ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಒಂದು ವರ್ಷವಾಗುತ್ತಿದ್ದರೂ ಈವರೆಗೆ ಸ್ಪಷ್ಟವಾದ ತೀರ್ಮಾನಗಳು ಹೊರಬಂದಿಲ್ಲ. ನಾವು ರೈತರ ಸಾಲ ಮನ್ನಾ ಮಾಡಿ, ಬ್ಯಾಂಕ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮತ್ತೆ ರೈತರಿಗೆ ಸಾಲ ಸಿಗುವಂತೆ ಮಾಡಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ಸಹಮತದಿಂದ ರೈತರ ಪರವಾಗಿ ಇಷ್ಟೊಂದು ದೊಡ್ಡ ತೀರ್ಮಾನ ಕೈಗೊಂಡಿವೆ ಎಂದು ಅವರು ತಿಳಿಸಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಸಿ ಚರ್ಚಿಸಲಾಗಿದೆ. ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಬಗ್ಗೆ ಒಂದು ವಾರದೊಳಗೆ ಅಧಿಕೃತವಾಗಿ ಸರಕಾರಿ ಆದೇಶ ಹೊರಬೀಳಲಿದೆ. ಸಹಕಾರಿ ಬ್ಯಾಂಕುಗಳಲ್ಲಿ ರೈತರ ಹೆಸರಿನಲ್ಲಿ ಸಂಘದವರೆ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಮನ್ನಾದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ದೂರುಗಳು ಬಂದಿವೆ ಎಂದು ಕಾಶೆಂಪೂರ್ ಹೇಳಿದರು. ರೈತರ ಸಾಲ ಮನ್ನಾ ಹಣ ದುರ್ಬಳಕೆ ಮಾಡಿಕೊಂಡರೆ ಕ್ಷಮಾಪಣೆ ಇಲ್ಲ, ಸ್ಥಳದಲ್ಲಿಯೇ ಅಂತಹವರನ್ನು ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಸಾಲ ಮನ್ನಾ ಆದೇಶದ ಜೊತೆಗೆ ಹಲವು ನಿಯಮಾವಳಿಗಳನ್ನು ರೂಪಿಸುತ್ತೇವೆ ಎಂದರು. ಪ್ರತಿಯೊಂದು ಸಹಕಾರಿ ಬ್ಯಾಂಕುಗಳ ಮುಂದೆ ಸಾಲ ಮನ್ನಾ ಸೌಲಭ್ಯ ಪಡೆದ ರೈತರು ಹಾಗೂ ಅವರು ಪಡೆದಿದ್ದ ಸಾಲದ ವಿವರಗಳನ್ನು ಕಡ್ಡಾಯವಾಗಿ ಬೋರ್ಡುಗಳಲ್ಲಿ ಹಾಕಬೇಕು. ಹೊಸ ಸಾಲ ಪಡೆಯಲು ಸಮಸ್ಯೆಯಾಗದಂತೆ ಪ್ರತಿಯೊಬ್ಬ ರೈತರಿಗೂ ಋಣಮುಕ್ತ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಕಾಶೆಂಪೂರ್ ಹೇಳಿದರು.

ಸಾಲದ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ರಾಜ್ಯದ ಹಣಕಾಸು ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಸರಕಾರದ ಪ್ರಸ್ತಾವನೆಗೆ ಬ್ಯಾಂಕ್ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದು, ತಮ್ಮ ಮಂಡಳಿ ಸಭೆಗಳಲ್ಲಿ ಈ ವಿಷಯವನ್ನು ಮಂಡಿಸಿ ಒಪ್ಪಿಗೆ ಪಡೆಯಲಿದ್ದಾರೆ. ಆನಂತರ ಸರಕಾರದ ಜೊತೆ ಒಡಂಬಡಿಕೆ ಮಾಡಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ರೈತರ ಬೆಳೆಗಳಿಗೆ ಬೆಂಬಲ ನೀಡಿ ಖರೀದಿ ಮಾಡುವ ಕೇಂದ್ರಗಳನ್ನು 15 ದಿನ ಮುಂಚಿತವಾಗಿಯೆ ಸಿದ್ಧಪಡಿಸಿಕೊಳ್ಳಲಾಗುವುದು. ಇದರಿಂದ, ಖಾಸಗಿಯವರು ರೈತರಿಗೆ ನಷ್ಟ ಉಂಟು ಮಾಡುವುದನ್ನು ತಡೆಗಟ್ಟಬಹುದು. ಈ ಸಂಬಂಧ ಕೇಂದ್ರ ಸರಕಾರದೊಂದಿಗೂ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಭತ್ತ, ಉದ್ದು ಹಾಗೂ ಹೆಸರು ಖರೀದಿಗೆ ಆಗಸ್ಟ್ 1 ರಿಂದಲೆ ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ಬೆಳೆ ಕೊಯ್ಲಿಗೆ ಬರುವ 15 ದಿನ ಮುಂಚಿತವಾಗಿಯೆ ಖರೀದಿ ಕೇಂದ್ರಗಳು ಹಾಗೂ ಗೋದಾಮುಗಳು ಸಿದ್ಧವಾಗುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಾಶೆಂಪೂರ್ ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿದ್ಧವಿರುವುದಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ಈ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಯಲ್ಲಿ ಆಗಿರುವ ತಾರತಮ್ಯವನ್ನು ಚರ್ಚೆ ಮೂಲಕ ಬಗೆಹರಿಸಿ ಕೊಳ್ಳಬಹುದು. ಆದರೆ, ಅದಕ್ಕಾಗಿ ಅಖಂಡ ಕರ್ನಾಟಕವನ್ನು ಇಬ್ಭಾಗ ಮಾಡುವಂತೆ ಹೋರಾಟ ನಡೆಸುವುದು ಸರಿಯಲ್ಲ. ಅಖಂಡ ಕರ್ನಾಟಕ ನಮ್ಮ ಅಭಿವೃದ್ಧಿಗೆ ಪೂರಕವಾಗಿರಬೇಕು.

-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News