ಶಿಸ್ತು-ಸಂಯಮದಿಂದ ಪ್ರತಿಪಕ್ಷಗಳನ್ನು ಸೋಲಿಸೋಣ: ದಿನೇಶ್‌ ಗುಂಡೂರಾವ್

Update: 2018-07-28 14:36 GMT

ಬೆಂಗಳೂರು, ಜು.28; ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಿಸ್ತು ಮತ್ತು ಸಂಯಮದಿಂದ ಪ್ರತಿಪಕ್ಷಗಳನ್ನು ಸೋಲಿಸಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿದರು.

ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮುಂಚೂಣಿ ಘಟಕಗಳ ಮಾಜಿ ಪದಾಧಿಕಾರಿಗಳ ಒಕ್ಕೂಟ ವತಿುಂದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳಬೇಕಾಗಿದೆ. ಜನತೆಯ ಬಳಿಗೆ ಹೋಗಿ ಕಾಂಗ್ರೆಸ್‌ನ ಜನಪರ ಸಿದ್ಧಾಂತದ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಮೋದಿಯ ತಪ್ಪು ನಡೆಗಳು: ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಿಗಳನ್ನು ಮಟ್ಟ ಹಾಕುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಲೂಟಿ ಮಾಡಿ ದೇಶ ತೊರೆಯುವವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಮರೆಮಾಚುವ ಸಲುವಾಗಿ ಬಣ್ಣ, ಬಣ್ಣದ ಮಾತುಗಳನ್ನಾಡಿ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರಧಾನಿ ಮೋದಿ ರೈತರಿಗೆ ಲಾಭದಾಯಕ ಬೆಂಬಲ ಬೆಲೆ, ಆದಾಯ ದ್ವಿಗುಣ ಹಾಗೂ ಕಪ್ಪು ಹಣ ತರುವುದಾಗಿ ಹೇಳಿ ಜನರನ್ನು ಮರುಳು ಮಾಡಿದ್ದಾರೆ. ಯಾವ ವಿಚಾರದಲ್ಲಿಯೂ ಬದ್ಧರಾಗಿಲ್ಲದ ಮೋದಿಯವರ ಆಡಳಿತ ಕಾರ್ಯ ವೈಖರಿ ದೇಶದ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಭ್ರಷ್ಟಾಚಾರ ಮಟ್ಟ ಹಾಕುವ ಬದಲು, ಲೂಟಿಕೋರ ಉದ್ಯಮಗಳೊಂದಿಗೆ ಭಾಗಿಯಾಗಿದ್ದಾರೆ ಎಂದು ಅವರು ಕಿಡಿಕಾರಿದರು.

ಬಿಜೆಪಿಯವರ ಹಿಂದುತ್ವ ಪ್ರತಿಪಾದನೆಯಿಂದ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾಗುತ್ತಿವೆ. ಕೇಂದ್ರ ಸರಕಾರದ ಅಭಿವೃದ್ಧಿ ಸಾಧನೆ ಶೂನ್ಯ ಇದ್ದರೂ, ದ್ವೇಷ, ವೈಷಮ್ಯ ಮೂಡಿಸುವುದೇ ಅಭಿವೃದ್ಧಿ ಎಂದುಕೊಂಡಿದ್ದಾರೆ. ಇದನ್ನು ಪ್ರಶ್ನಿಸುವವರ ವಿರುದ್ಧ ಐಟಿ ದಾಳಿ ಮೂಲಕ ಬೆದರಿಸಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News