ಸಿಎಂ ನಾಡಿನ ಜನತೆ ಕ್ಷಮೆ ಕೋರದಿದ್ದರೆ ಹೋರಾಟ: ಯಡಿಯೂರಪ್ಪ ಎಚ್ಚರಿಕೆ

Update: 2018-07-28 15:41 GMT

ಬೆಂಗಳೂರು, ಜು. 28: ಉತ್ತರ ಕರ್ನಾಟಕ ಬಗ್ಗೆ ಸಿಎಂ ಕುಮಾರಸ್ವಾಮಿ ಬಾಯಿ ತಪ್ಪಿನಿಂದ ಆಡಿದ ಮಾತು ಎಂದು ನಾಡಿನ ಜನತೆ ಕ್ಷಮೆ ಕೋರಬೇಕು. ಅಲ್ಲದೆ, ಇದೇ ಧೋರಣೆ ಮುಂದುವರೆಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ 37 ಕ್ಷೇತ್ರಕ್ಕೆ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ, ನೀವು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಎಂದು ಇದೇ ವೇಳೆ ಹೇಳಿದರು.

ನಿಮ್ಮ ಒಡೆದು ಆಳುವ ನೀತಿಯನ್ನು ಮೊದಲು ಕೈಬಿಡಿ. ನಿಮ್ಮ ಧೋರಣೆ ಇದೇ ರೀತಿ ಮುಂದುವರಿದರೆ ರಾಜ್ಯದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ. ಉತ್ತರ ಕರ್ನಾಟಕ ಕುರಿತು ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಎಸ್‌ವೈ ಆಗ್ರಹಿಸಿದರು.

ಸ್ವಾರ್ಥ ರಾಜಕೀಯ, ಅಧಿಕಾರದ ದಾಹಕ್ಕಾಗಿ ಕೈ ಹಿಡಿದವರಿಗೆ ವಂಚನೆ ಮಾಡಿದ್ದೀರಿ. ಇದೀಗ ರಾಜ್ಯವನ್ನೇ ಒಡೆಯಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದ ಯಡಿಯೂರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಕುಮಾರಸ್ವಾಮಿಯವರೇ ನಿಮ್ಮ ಕುಟುಂಬದ ಹಿರಿಯರ ರಾಜಕೀಯ ಲಾಭಕ್ಕೆ ಕಿಚ್ಚು ಹಚ್ಚುವ ಕೆಲಸ ಮಾಡಬೇಡಿ. ಬಿಜೆಪಿ ಅವಧಿಯಲ್ಲಿ ಸುವರ್ಣಸೌಧ ಕಟ್ಟಡ ನಿರ್ಮಾಣ ಮಾಡಲಾಯಿತು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಬೇರೆಯಾಗಿ ಯಾರೂ ನೋಡಬಾರದು. ನಿಮ್ಮ ಹೇಳಿಕೆಯಿಂದ ಜನತೆ ಕೆರಳಿದ್ದಾರೆಂದು ಟೀಕಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ಉತ್ತರ ಕರ್ನಾಟಕ ಭಾಗ ಹೊತ್ತಿ ಉರಿಯುತ್ತಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷವೇ ಹೊಣೆ ಹೊರಬೇಕು. ಈ ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂಬುದು ಬಿಜೆಪಿ ನಿಲುವು’
-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News