ಭಿಕ್ಷುಕರ ಪುನರ್ವಸತಿಗೆ ಹಣ ಪಾವತಿಸದ ಬಿಬಿಎಂಪಿ: ಆರೋಪ

Update: 2018-07-28 15:59 GMT

ಬೆಂಗಳೂರು, ಜು.28: ಪೌರಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡಿ ಟೀಕೆಗೆ ಗುರಿಯಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಭಿಕ್ಷುಕರ ಪುವರ್ವಸತಿಗೆಂದು ಸಾರ್ವಜನಿಕರಿಂದ ಸಂಗ್ರಹಿಸಿರುವ ಕೋಟಿಗಟ್ಟಲೆ ತೆರಿಗೆ ಹಣವನ್ನು ವಿನಿಯೋಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪಾಲಿಕೆ ಆಯುಕ್ತರಿಗೆ ಕಳೆದ ಮೇ 22ರಂದು ಬರೆದ ಪತ್ರದಲ್ಲಿ, 2008ರಿಂದ ಇಲ್ಲಿಯವರೆಗೆ ಸಮಾಜ ಕಲ್ಯಾಣ ಇಲಾಖೆಯಡಿ ಕೇಂದ್ರ ಪರಿಹಾರ ಸಮಿತಿಗೆ ಬಿಬಿಎಂಪಿ 130 ಕೋಟಿ ರೂಪಾಯಿ ತೆರಿಗೆ ಮೊತ್ತ ಪಾವತಿಸಬೇಕಿದೆ. ಕರ್ನಾಟಕ ಭಿಕ್ಷುಕರ ಪುನರ್ವಸತಿ ಕಾಯ್ದೆ 1975ರಡಿ, ವರ್ಷಕ್ಕೆ ಶೇ.3ರಷ್ಟು ವಾರ್ಷಿಕ ಆಸ್ತಿ ತೆರಿಗೆಯನ್ನು ಭಿಕ್ಷುಕರ ಪುನರ್ವಸತಿ ತೆರಿಗೆಯೆಂದು ಸಂಗ್ರಹಿಸಲಾಗುತ್ತದೆ. ರಸ್ತೆ ಬದಿಯಲ್ಲಿರುವ ಭಿಕ್ಷುಕರನ್ನು ಕರೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ಅಲ್ಲಿ ಅವರಿಗೆ ತೋಟಗಾರಿಕೆ, ಕಸೂತಿ, ಹೊಲಿಗೆ, ಬಕೆಟ್ ತಯಾರಿಸುವುದು ಸೇರಿದಂತೆ ಇನ್ನಿತರ ತರಬೇತಿ ನೀಡಲಾಗುತ್ತದೆ. ಅಲ್ಲಿ ಅವರಿಗೆ ಉದ್ಯೋಗ ನೀಡಿ ತಿಂಗಳಿಗೆ 4 ಸಾವಿರದಿಂದ 5 ಸಾವಿರದವರೆಗೆ ವೇತನ ನೀಡಲಾಗುತ್ತದೆ.

ಕರ್ನಾಟಕದಲ್ಲಿ ಪ್ರಸ್ತುತ 14 ಪುನರ್ವಸತಿ ಕೇಂದ್ರಗಳಿದ್ದು ಬೆಂಗಳೂರಿನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಸುಮಾರು 700 ಭಿಕ್ಷುಕರಿದ್ದಾರೆ. ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಣದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ಚಂದ್ರ ನಾಯ್ಕಿ, ನಮ್ಮ ಹಣಕ್ಕೆ ನಾವು ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ದೀರ್ಘಕಾಲದ ಬೇಡಿಕೆ ನಂತರ ಬಿಬಿಎಂಪಿ ಒಟ್ಟು ಮೊತ್ತದ ಕೆಲ ಭಾಗವನ್ನು ಬಿಡುಗಡೆ ಮಾಡಿದೆ. 2008ರಿಂದ ತೆರಿಗೆ ಹಣ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಇದೀಗ 130.31 ಕೋಟಿ ರೂಪಾಯಿ ಹಣ ನಮಗೆ ಬಿಬಿಎಂಪಿಯಿಂದ ಬರಬೇಕಿದೆ. ಪುನರ್ವಸತಿ ಕೇಂದ್ರಗಳು ನರಗ ಪಾಲಿಕೆ ಮತ್ತು ಪಂಚಾಯತ್‌ಗಳು ಸಂಗ್ರಹಿಸುವ ತೆರಿಗೆ ಹಣವನ್ನು ನಂಬಿಕೊಂಡಿವೆ.

ಬಿಬಿಎಂಪಿಗೆ ತೆರಿಗೆ ಹಣ ಕರ್ನಾಟಕದಲ್ಲಿ ಹೆಚ್ಚು ಬರುತ್ತದೆ, ಬಾಕಿ ಹಣ ನೀಡಲು ಬಿಬಿಎಂಪಿಗೆ ತಿಂಗಳಲ್ಲಿ ಮೂರು ಸಲ ಹೋಗುತ್ತೇನೆ. ಆದರೆ ಇದುವರೆಗೆ ಹಣವನ್ನು ಅಲ್ಲಿನ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆಗಾಗಿ ಮೇಯರ್ ಸಂಪತ್‌ರಾಜ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ಸುದ್ದಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News