ಜಿ.ಎಸ್.ಟಿ ಯಿಂದ ಕೈಮಗ್ಗ ಉತ್ಪನ್ನಗಳಿಗೆ ವಿನಾಯಿತಿಗೆ ರಂಗಕರ್ಮಿ ಪ್ರಸನ್ನ ಆಗ್ರಹ

Update: 2018-07-28 16:01 GMT

ಬೆಂಗಳೂರು, ಜು.28: ಕೈ ಮಗ್ಗ ಉತ್ಪನ್ನಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು ಹಾಗೂ ರಾಜ್ಯ ಸರಕಾರ ನೇಕಾರರ ಸಹಾಯಕ್ಕೆ ಧಾವಿಸಬೇಕು ಎಂದು ಆಗ್ರಹಿಸಿ ಗ್ರಾಮಸೇವಾ ಸಂಘದ ವತಿಯಿಂದ ಕೈ-ಮಗ್ಗ ಹಾಗೂ ಖಾದಿಯಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವ ಚಳವಳಿಗೆ ಆ.7 ರಂದು ನಗರದ ಎಂ.ಜಿ.ರಸ್ತೆಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಲಕ್ಷಾಂತರ ಕೈ ಮಗ್ಗ ನೇಕಾರರು ಸಂಕಷ್ಟದ ಸ್ಥಿತಿಯಲ್ಲಿದ್ದು, ಉತ್ತರ ಕರ್ನಾಟಕದ ಹಾಗೂ ಹೈದರಾಬಾದ್ ಕರ್ನಾಟಕದ ಅತಿ ದೊಡ್ಡ ಉದ್ದಿಮೆಯಾಗಿದೆ. ಮಧ್ಯಮ ವರ್ಗ ಹಾಗೂ ಹಿಂದುಳಿದ ವರ್ಗದವರು ನಡೆಸುವ ಕೈ ಮಗ್ಗ ಹಾಗೂ ಕೈಯಿಂದ ತಯಾರಿಸುವ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸುವ ಮೂಲಕ ಮತ್ತಷ್ಟು ಸಂಕಷ್ಟವನ್ನು ತಂದಿಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮುಚ್ಚುವ ಸ್ಥಿತಿಗೆ ತಲುಪಿದೆ. ಕೈಮಗ್ಗವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ಇದರಿಂದಾಗಿ ಬೀದಿ ಪಾಲಾಗುತ್ತವೆ. ನಿಗಮದ ವ್ಯಾಪ್ತಿಯಿಂದ ಹೊರಗುಳಿದಿರುವ ನೇಕಾರರ ಸ್ಥಿತಿ ಹೀನಾಯವಾಗಿದೆ. ಅಭಿವೃದ್ಧಿ ನಿಗಮವನ್ನು ರಾಜ್ಯ ಸರಕಾರ ನಡೆಸಲು ಅಸಮರ್ಥವಾಗಿದೆ. ಹೀಗಾಗಿ, ನಿಗಮವನ್ನು ನೇಕಾರರಿಗೆ ವಹಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಅಮುಲ್ ಸಂಸ್ಥೆ ಹೇಗೆ ಲಕ್ಷಾಂತರ ಗೌಳಿಗ ಗ್ರಾಮೀಣ ಮಹಿಳೆಯರ ಬದುಕಿಗೆ ಭದ್ರತೆ ನೀಡಲಾಗಿದೆಯೋ, ಅದೇ ಮಾದರಿಯಲ್ಲಿ ನೇಕಾರರಿಗೆ ತಮ್ಮ ಉದ್ದಿಮೆಯನ್ನು ತಾವೇ ನಡೆಸಿಕೊಳ್ಳಲು ಸಮರ್ಥರಿದ್ದಾರೆ. ಸರಕಾರ ನೇಕಾರರ ಕುಟುಂಬಗಳಿಗೆ ಭದ್ರತೆ ನೀಡಬೇಕು. ಇಲ್ಲದಿದ್ದರೆ, ರಾಷ್ಟ್ರೀಯ ನೇಕಾರರ ದಿನಾಚರಣೆಯ ಅಂಗವಾಗಿ ಆ.7 ರಿಂದ ಎಲ್ಲ ನೇಕಾರ ಸಂಘಟನೆಗಳೊಂದಿಗೆ ಸೇರಿ ಕೈ ಮಗ್ಗ ಸತ್ಯಾಗ್ರಹವನ್ನು ಆರಂಭಿಸಲಾಗುತ್ತದೆ. ಆ.9 ರಂದು ಹುಬ್ಬಳ್ಳಿಯಲ್ಲಿರುವ ಕೆಎಸ್‌ಡಿಸಿ ಕೇಂದ್ರ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಂಬಾನಿ ಮತ್ತು ಅದಾನಿಯವರ ಕಂಪೆನಿಗಳನ್ನು ಉಳಿಸಿ ಬೆಳೆಸಲು ಸರಕಾರಗಳು ಶ್ರಮಿಸುತ್ತಿವೆ. ರೈತರ ಸಾಲ ಮನ್ನಾಗಾಗಿ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಆದರೆ, ಉತ್ತರ ಕರ್ನಾಟಕ ಭಾಗದ 45 ಲಕ್ಷಕ್ಕೂ ಹೆಚ್ಚು ಜನ ಜೀವನ ಮಾಡುತ್ತಿರುವ ಕೈ ಮಗ್ಗ ಕ್ಷೇತ್ರ ಉಳಿಸಲು ಸರಕಾರ ಮುಂದಾಗುತ್ತಿಲ್ಲ. ಇದು ಅತ್ಯಂತ ದುಃಖಕರ ಸಂಗತಿ ಎಂದು ಅವರು ಬೇಸರದಿಂದ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News