ಪೈಶಾಚಿಕ ಕೃತ್ಯ: ಗಬ್ಬದ ಆಡಿನ ಮೇಲೆ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ

Update: 2018-07-29 04:00 GMT

ಹೊಸದಿಲ್ಲಿ, ಜು.29: ಗರ್ಭಿಣಿ ಆಡಿನ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಹರ್ಯಾಣದ ಮೇವಾಟ್ ನಗರದಲ್ಲಿ ಬೆಳಕಿಗೆ ಬಂದಿದೆ. ಆಡು ಸಾವಿಗೀಡಾಗಿದೆ.

ಆಡಿನ ಮಾಲಕ ಅಸ್ಲು ಈ ಸಂಬಂಧ ಪೊಲೀಸ್ ದೂರು ನೀಡಿದ್ದಾರೆ. "ಅಸ್ಲು ಜುಲೈ 26ರಂದು ಈ ಸಂಬಂಧ ದೂರು ದಾಖಲಿಸಿದ್ದು, ತನ್ನ ಆಡಿನ ಮೇಲೆ ಜುಲೈ 25ರಂದು ರಾತ್ರಿ ಎಂಟು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ" ಎಂದು ನಗೀನಾ ಠಾಣಾಧಿಕಾರಿ ರಾಜಬೀರ್ ಸಿಂಗ್ ಹೇಳಿದ್ದಾರೆ.

ಅತ್ಯಾಚಾರಿಗಳು ಪಲಾಯನ ಮಾಡಿದ್ದು, ಆಡನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಬೇಕಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಪೆಟಾ ಇಂಡಿಯಾದ ತುರ್ತು ಸ್ಪಂದನೆ ಸಂಯೋಜಕ ಮೀತ್ ಅಶರ್ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಈ ಘಟನೆಯನ್ನು ಪ್ರಾಣಿಗಳ ಲೈಂಗಿಕ ಕಿರುಕುಳದ ಭಯಾನಕ ಕೃತ್ಯ ಎಂದು ಬಣ್ಣಿಸಿದ್ದಾರೆ. "ಸಾಮೂಹಿಕ ಅತ್ಯಾಚಾರದ ಬಳಿಕ, ಆಡಿಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಲಾಗಿದೆ" ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ದೂರಿದ್ದಾರೆ.

ಪ್ರಾಣಿಹಿಂಸೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. "ಪ್ರಾಣಿಗಳ ವಿರುದ್ಧದ ಲೈಂಗಿಕ ಕಿರುಕುಳ ಹೆಚ್ಚುತ್ತಿದ್ದು, ಇಂಥ ಕಾಮುಕರು ಮೊದಲು ತಮ್ಮ ಕಾಮತೃಷೆಗೆ ಪ್ರಾಣಿಗಳನ್ನು ಬಳಸಿಕೊಂಡು ಬಳಿಕ ಮನುಷ್ಯರತ್ತ ಮುಖ ಮಾಡುತ್ತಾರೆ. ಆದ್ದರಿಂದ ಈ ಪ್ರಕರಣ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಸಂದೇಶ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News