ಮಹಿಳಾ ಟ್ವೆಂಟಿ-20 ಕ್ರಿಕೆಟ್: ವೇಗದ ಅರ್ಧಶತಕ ದಾಖಲೆ ಸರಿಗಟ್ಟಿದ ಸ್ಮೃತಿ ಮಂಧಾನ

Update: 2018-07-30 06:52 GMT

ಹೊಸದಿಲ್ಲಿ, ಜು.31: ಮಹಿಳಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕದ ದಾಖಲೆ ಸರಿಗಟ್ಟಿದ ಭಾರತದ ಸ್ಮೃತಿ ಮಂಧಾನ ಕ್ರಿಕೆಟ್ ದಾಖಲೆ ಪುಸ್ತಕಕ್ಕೆ ತನ್ನ ಹೆಸರನ್ನು ದಾಖಲಿಸಿದರು. 

ಮಂಧಾನ ಇಂಗ್ಲೆಂಡ್‌ನ ಪ್ರೀಮಿಯರ್ ಮಹಿಳಾ ದೇಶೀಯ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

ವೆಸ್ಟರ್ನ್ ಸ್ಟೋರ್ಮ್ ಪರ ಬ್ಯಾಟಿಂಗ್ ಮಾಡಿದ್ದ ಮಂಧಾನ ಲಾಫ್ಬರೋ ತಂಡದ ವಿರುದ್ಧ ಕೇವಲ 18 ಎಸೆತಗಳಲ್ಲಿ 50 ರನ್ ತಲುಪಿದರು. 2015ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತ ವಿರುದ್ಧ ಟ್ವೆಂಟಿ-20ಯಲ್ಲಿ ನ್ಯೂಝಿಲೆಂಡ್‌ನ ಸೋಫಿ ಡಿವೈನ್ ದಾಖಲಿಸಿದ್ದ ಅರ್ಧಶತಕದ ದಾಖಲೆ ಸರಿಗಟ್ಟಿದ್ದಾರೆ.

ಇಂಗ್ಲೆಂಡ್‌ನ ಮಹಿಳಾ ದೇಶೀಯ ಟ್ವೆಂಟಿ-20 ಟೂರ್ನಿಯಲ್ಲಿ ಆಡಿದ ಭಾರತದ ಮೊದಲ ಆಟಗಾರ್ತಿಯಾಗಿರುವ ಮಂಧಾನ ಮಳೆಯಿಂದಾಗಿ 6 ಓವರ್‌ಗೆ ಸೀಮಿತಗೊಂಡ ಪಂದ್ಯದಲ್ಲಿ 19 ಎಸೆತಗಳಲ್ಲಿ ಔಟಾಗದೆ 52 ರನ್ ಗಳಿಸಿದರು. ವೆಸ್ಟರ್ನ್ ಸ್ಟೋರ್ಮ್ ತಂಡ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಲು ನೆರವಾಗಿದ್ದಾರೆ. ಮಂಧಾನ ಅವರ ಬಿರುಸಿನ ಬ್ಯಾಟಿಂಗ್‌ನಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು.

22ರ ಹರೆಯದ ಮಂಧಾನ ಭಾರತದ ಪರ 42 ಟಿ-20 ಪಂದ್ಯಗಳನ್ನು ಆಡಿದ್ದಾರೆ. 5 ಅರ್ಧಶತಕ ಸಹಿತ ಒಟ್ಟು 857 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News