×
Ad

ಎಲಿವೆಟೆಡ್ ಕಾರಿಡಾರ್: ‘ಪರಿಸರ ಪರಿಣಾಮ’ ಮೌಲ್ಯಮಾಪನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

Update: 2018-07-30 18:18 IST

ಬೆಂಗಳೂರು, ಜು. 30: ಸಂಚಾರ ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಬೆಂಗಳೂರಿನಲ್ಲಿ 102 ಕಿ.ಮೀ ಉದ್ದದ ಎತ್ತರಿಸಿದ ರಸ್ತೆ(ಎಲಿವೆಟೆಡ್ ಕಾರಿಡಾರ್) ನಿರ್ಮಾಣ ಸಂಬಂಧ ರಸ್ತೆ ಅಭಿವೃದ್ಧಿ ನಿಗಮದಿಂದ ಏಕಾಂ, ಡೆಲಾಯಿಟ್ ಹಾಗೂ ಇನ್ಫ್ರಾಸಪೋರ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ಸಿದ್ಧಪಡಿಸಿರುವ ವಿಸ್ತೃತ ಸಂಭವನೀಯ ವರದಿ(ಡೀಟೈಲ್ಡ್ ಫೀಸೆಬಿಲಿಟಿ ರಿಪೋರ್ಟ್)ಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಪರಾಮರ್ಶಿಸಿದರು.

ಬೆಂಗಳೂರಿನ ವಾಹನ ದಟ್ಟಣೆಯನ್ನು ಕಡಿತಗೊಳಿಸಲು ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೂ, ಮೆಟ್ರೋ ಯೋಜನೆಯೊಂದೇ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾರದು. ಪ್ರಸ್ತಾಪಿಸಲಾಗಿರುವ ಯೋಜನೆಯ ಕುರಿತಂತೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಹಾಗೂ ಪರಿಸರ ಪರಿಣಾಮ ಮೌಲ್ಯಮಾಪನ ಕೈಗೊಳ್ಳಲು ಕುಮಾರಸ್ವಾಮಿ ಸೂಚಿಸಿದರು.

ನಗರದಲ್ಲಿ ವಾಹನ ದಟ್ಟಣೆ ಸುಗಮಗೊಳಿಸಲು, ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಹಾಗೂ ಮಾಲಿನ್ಯದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ನಗರದಲ್ಲಿ ಆರು ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ಆರು ಪಥ ಉತ್ತರ-ದಕ್ಷಿಣ ಕಾರಿಡಾರ್-1, ಕೆ.ಆರ್.ಪುರಂನಿಂದ ಗೊರಗುಂಟೆಪಾಳ್ಯದ ವರೆಗೆ (ರಾಮಮೂರ್ತಿನಗರ ರಿಂಗ್ ರಸ್ತೆಯಿಂದ ಐಟಿಪಿಎಲ್ ಮಾರ್ಗ ಸೇರಿ) ಆರು ಪಥ ಪೂರ್ವ-ಪಶ್ಚಿಮ ಕಾರಿಡಾರ್-1, ವರ್ತೂರು ಕೋಡಿಯಿಂದ ಜ್ಞಾನಭಾರತಿ ವರೆಗೆ ಪೂರ್ವ-ಪಶ್ಚಿಮ ಕಾರಿಡಾರ್-2, ಚತುಷ್ಪಥ ರಸ್ತೆಯುಳ್ಳ ಸಂಪರ್ಕ ಕಾರಿಡಾರ್ 1, 2, 3 ರಸ್ತೆ ನಿರ್ಮಿಸಲು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಗೃಹ ಹಾಗೂ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News