ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಸಲ್ಲದು: ಮಾಜಿ ಸಚಿವ ರಾಮಚಂದ್ರಗೌಡ

Update: 2018-07-30 12:59 GMT

ಬೆಂಗಳೂರು, ಜು.30: ಕರ್ನಾಟಕ ಅಖಂಡ ಕರ್ನಾಟಕವಾಗಿಯೇ ಉಳಿಯಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ರಾಮಚಂದ್ರಗೌಡರು ಅಭಿಪ್ರಾಯಿಸಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ನೆಲ-ಜಲ-ಭಾಷೆ’ ಸಾಂಸ್ಕೃತಿಕ ಹಬ್ಬ ಹಾಗೂ ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿ ಮತ್ತು ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಖಂಡ ಕರ್ನಾಟಕ, ಸಮಗ್ರ ಕರ್ನಾಟಕವಿರಬೇಕು. ನೆಲ, ಜಲ, ಭಾಷೆ ವಿಷಯ ಬಂದಾಗ ಎಲ್ಲರೂ ಸೇರಿ ಹೋರಾಟ ಮಾಡಬೇಕು. ಮೂಲಭೂತ ಸೌಲಭ್ಯಗಳ ಕೊರತೆಯಿದೆ ಅಥವಾ ತಾರತಮ್ಯ ಮಾಡಲಾಗಿದೆ ಎಂದು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವುದು ಎಷ್ಟು ಸರಿ. ಸಮಸ್ಯೆಯಿದ್ದರೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದ ಎಲ್ಲರೂ ಸಹೋದರರಂತೆ ಇದೀವಿ. ಅದನ್ನು ಒಡೆಯಬಾರದು ಎಂದು ಹೇಳಿದರು.

ಹೋಳಿಗೆಯಲ್ಲಿ ಬೆಲ್ಲ, ಬೇಳೆಕಾಳು, ಹಿಟ್ಟನ್ನು ಹೇಗೆ ಪ್ರತ್ಯೇಕ ಮಾಡಲು ಸಾಧ್ಯವಾಗುವುದಿಲ್ಲವೋ, ಅದೇ ರೀತಿಯಲ್ಲಿ ಒಂದಾಗಿರುವ ಕರ್ನಾಟಕವನ್ನು ಇಬ್ಭಾಗ ಮಾಡಲು ಸಾಧ್ಯವಾಗಲ್ಲ. ಯಾವುದೇ ಕಾರಣಕ್ಕೂ ನಾವು ಒಡೆಯಲು ಬಿಡುವುದಿಲ್ಲ. ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲ ಕಡೆಯಲ್ಲಿಯೂ ವಿಭಿನ್ನ ನೆಲೆಗಳಲ್ಲಿ ಹರಡಿಕೊಂಡು ಅಪಾರವಾದ ಮೆಚ್ಚುಗೆ ಗಳಿಸಿದೆ. ಹೀಗಾಗಿ, ಅದನ್ನು ಪ್ರತ್ಯೇಕ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಈ ಬಗ್ಗೆ ಯಾರೂ ಚಿಂತಿಸಬಾರದು ಎಂದು ನುಡಿದರು.

ಮಕ್ಕಳ ಸಾಹಿತಿ ಡಾ.ರಾಜೇಂದ್ರ ಎಸ್.ಗಡಾದ ಮಾತನಾಡಿ, ಪ್ರತಿಯೊಬ್ಬರೂ ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾರೆ. ರಾಜಕಾರಣ, ಸಾಹಿತ್ಯ, ಸಾಂಸ್ಕೃತಿಕ, ಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಇದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಹಂಚಿಹೋಗಿದ್ದಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮಾತನಾಡಿ, ರಾಜಕೀಯ ಲಾಭಕ್ಕಾಗಿ ಕರ್ನಾಟಕವನ್ನು ಎರಡು ಭಾಗ ಮಾಡಲು ಮುಂದಾಗಿದ್ದಾರೆ. ಸ್ವಾರ್ಥದ ರಾಜಕಾರಣ ಮಾಡುತ್ತಿದ್ದು, ನಾವು ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ನೀಡುವುದಿಲ್ಲ. ಅಲ್ಲದೆ, ನಾವು ಪ್ರತ್ಯೇಕ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಭೂಷಣ ರಾಷ್ಟ್ರಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಗೌರವ ಡಾಕ್ಟರೇಟ್ ಅಭಿನಂದನೆ ಮತ್ತು ಪ್ರಶಸ್ತಿ, ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ, ಕರ್ನಾಟಕ ಸಹಕಾರ ರತ್ನ ಹಾಗೂ ಉದ್ಯೋಗ ರತ್ನ ರಾಜ್ಯ ಪ್ರಶಸ್ತಿ ಕರ್ನಾಟಕ ವಿದ್ಯಾಭೂಷಣ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ವಿಭೂಷಣ ಆದರ್ಶ ದಂಪತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ರಘುಮೂರ್ತಿ, ಸಾಹಿತಿ ಕುಂ.ವೀರಭದ್ರಪ್ಪ, ಕರ್ನಾಟಕ ಹೌಸಿಂಗ್ ಬೋರ್ಡ್ ಮಾಜಿ ಅಧ್ಯಕ್ಷ ಎಸ್.ಜಿ.ನಂಜಯ್ಯ ಮಠ, ಚಲನಚಿತ್ರ ಕಲಾವಿದೆ ಮೀನಾ, ಕುಮಾರ ಚಂದ್ರನಾಥಶೇಖರ ಸ್ವಾಮೀಜಿ, ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News