ಲಯನ್ಸ್ ಕ್ಲಬ್‌ನ ನೂತನ ಘಟಕ ‘ಬೆಂಗಳೂರು ಅರ್ಪಣ’ಕ್ಕೆ ಚಾಲನೆ

Update: 2018-07-30 13:03 GMT

ಬೆಂಗಳೂರು, ಜು.30: ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್‌ನ ರಾಜಾಜಿನಗರ ವಲಯದ ‘ಬೆಂಗಳೂರು ಅರ್ಪಣ’ ಹೆಸರಿನ ನೂತನ ಶಾಖೆಯನ್ನು ಶಾಸಕ ಡಾ.ಅಶ್ವಥ್ ನಾರಾಯಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಮೂಲಕ ಭವ್ಯವಾದ ಸಮಾಜ ನಿರ್ಮಾಣ ಮಾಡಬೇಕು. ಪ್ರತಿಯೊಬ್ಬರಲ್ಲಿಯೂ ಮಾನವೀಯತೆ ರೂಪಗೊಳ್ಳಬೇಕು. ಇಂದು ಲಯನ್ಸ್ ಕ್ಲಬ್ ಎಂದ ತಕ್ಷಣ ಎಲ್ಲರೂ ಗುರುತಿಸುತ್ತಾರೆ. ಬಡವರು, ನಿರ್ಗತಿಕರು, ಅಂಗವಿಕಲರಿಗೆ ಸಹಾಯ ಹಸ್ತ ನೀಡುತ್ತಿದೆ. ಅಲ್ಲದೆ, ಈ ಸಂಸ್ಥೆಯೊಂದಿಗಿನ ಒಡನಾಟ ವ್ಯಕ್ತಿತ್ವ ವಿಕಸನದ ಜೊತೆಗೆ ನಾಯಕತ್ವದ ಗುಣ ನೀಡುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಪ್ರಗತಿಗೆ ನೆರವು ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿದೆ. ಯುವಜನತೆ ಅಧಿಕ ಸಂಖ್ಯೆಯಲ್ಲಿ ಲಯನ್ಸ್ ಕ್ಲಬ್ ಸದಸ್ಯರಾಗಿ ಸಮಾಜ ಸೇವೆ ಮಾಡಬೇಕು. ಎಲ್ಲರೂ ತಮ್ಮ ಆದಾಯ ಮತ್ತು ಸಮಯದ ಸ್ವಲ್ಪಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.

ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಡಾ.ಪಿ.ಆರ್.ಎಸ್.ಚೇತನ್ ಮಾತನಾಡಿ, ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಸ್ನೇಹ ಮತ್ತು ಸೇವೆಯೊಂದಿಗೆ ಉತ್ತಮ ಪ್ರಗತಿ ಸಾಧಿಸುವುದೇ ಲಯನ್ಸ್ ಕ್ಲಬ್ ಧ್ಯೇಯವಾಗಿದೆ. ವಿಶ್ವದ 210 ದೇಶಗಳಲ್ಲಿ 46 ಸಾವಿರ ಲಯನ್ಸ್ ಕ್ಲಬ್‌ಗಳ 14 ಲಕ್ಷ ಸದಸ್ಯರು ಸೇವಾ ದೀಕ್ಷೆಯೊಂದಿಗೆ ಉತ್ತಮ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು. ವೈಯಕ್ತಿಕವಾಗಿ ಮಾಡುವ ದಾನ-ಧರ್ಮ ಹಾಗೂ ಸಮಾಜ ಸೇವೆಗಿಂತ ಲಯನ್ಸ್ ಕ್ಲಬ್‌ನಂತಹ ಸೇವಾ ಸಂಸ್ಥೆಯ ಮೂಲಕ ಮಾಡುವ ಸಾಮೂಹಿಕ ಸೇವೆ ಹೆಚ್ಚು ಮಹತ್ವ ಪೂರ್ಣವಾಗಿದೆ ಎಂದು ತಿಳಿಸಿದರು.

ಕ್ಲಬ್‌ನ ನೂತನ ಅಧ್ಯಕ್ಷ ಆರ್.ವೆಂಕಟೇಶ್ ಮಾತನಾಡಿ, ನಾವು ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಆರ್ಥಿಕವಾಗಿ ದುರ್ಬಲರಿಗೆ ವಿದ್ಯಾಭ್ಯಾಸ ಮುಂದುವರಿಸಲು ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯಪೀಡಿತರಿಗೆ ನೆರವು ನೀಡುವುದರಿಂದ ತೃಪ್ತಿ ದೊರಕಲಿದೆ. ಇದರಿಂದ ಸಮಾಜದಲ್ಲಿ ಮಾನವೀಯ ಮೌಲ್ಯ ಬಿತ್ತಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನೂತನವಾಗಿ ಆರಂಭಗೊಂಡಿರುವ ಲಯನ್ಸ್ ಕ್ಲಬ್ ವತಿಯಿಂದ ಮುಂಬರುವ ದಿನಗಳಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ, ರಕ್ತದಾನ ಶಿಬಿರ ನಡೆಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸುಬ್ರಮಣ್ಯನಗರ ವಾರ್ಡ್‌ನ ಬಿಬಿಎಂಪಿ ಸದಸ್ಯ ಎಚ್.ಮಂಜುನಾಥ, ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ರೇಣುಕುಮಾರ್, ಉದಯಶಂಕರ್, ಬಾಲಕೃಷ್ಣ, ಅನಿಲ್‌ರೆಡ್ಡಿ, ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ರೋಗಿಯೊಬ್ಬರಿಗೆ ವೀಲ್ ಚೇರ್ ಹಾಗೂ ಅಂಧರಿಗೆ ಪರಿಕರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News