ನಾಲ್ಕೈದು ದಿನಗಳಲ್ಲಿ ಸಾಲಮನ್ನಾ ಬಗ್ಗೆ ಅಧಿಕೃತ ಆದೇಶ ಜಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-30 13:38 GMT

ಬೆಂಗಳೂರು, ಜು. 30: ರಾಜ್ಯದಲ್ಲಿ 49 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ರೈತರ ಕೃಷಿ ಸಾಲಮನ್ನಾ ಮಾಡಲಾಗಿದ್ದು, ಈ ಕುರಿತು ನಾಲ್ಕೈದು ದಿನಗಳಲ್ಲಿ ಆದೇಶ ಹೊರಡಿಸಲಿದ್ದು, ಅತ್ಯಂತ ಪಾರದರ್ಶಕವಾಗಿ ಯೋಜನೆ ಜಾರಿಗೆ ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳು ಮುಂದಾಗಬೇಕೆಂದು ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ.

ಸೋಮವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದು. ಮಧ್ಯವರ್ತಿಗಳು ಈ ಯೋಜನೆಯ ದುರುಪಯೋಗ ಪಡೆಯದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.

ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ಆದ್ಯತೆ ನೀಡಿ. ಪ್ರತಿ ತಿಂಗಳು ತಾಲೂಕುಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಸೂಚಿಸಿದ ಅವರು, ಚುನಾವಣೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ಅಧಿಕಾರಿಗಳು ಚುರುಕಾಗಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಉತ್ತಮ ಕೆಲಸ ಮಾಡಿ ಸರಕಾರಕ್ಕೆ ಒಳ್ಳೆಯ ಹೆಸರು ತನ್ನಿ ಎಂದರು.

ಮಾಧ್ಯಮಗಳಲ್ಲಿ ಸರಕಾರದ ಕುರಿತು ಪ್ರಕಟಿಸುವ ವರದಿಗಳಿಗಿಂತ ಅಭಿವೃದ್ಧಿಗೆ ಆದ್ಯತೆ ನೀಡಿ. ಈ ಸರಕಾರ 5 ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಲಿದೆ ಎಂದು ಪುನರುಚ್ಚರಿಸಿದ ಅವರು, ನಿರುದ್ಯೋಗ ಸಮಸ್ಯೆ ನಿವಾರಿಸಿ, ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ಜನಸಾಮಾನ್ಯರನ್ನು ನೇರವಾಗಿ ಭೇಟಿ ಮಾಡಿ ಎಂದು ಸೂಚಿಸಿದರು.

ಸರಕಾರ ನಡೆಸುವ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಮೂಲ ಸೌಕರ್ಯ ಆಹಾರದ ಗುಣಮಟ್ಟ ಪರಿಶೀಲಿಸಬೇಕು. ಅದರಂತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಆಯಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಪ್ರೇರೇಪಿಸಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಶಾಲೆ-ಕಾಲೇಜುಗಳಿಗೆ 1ಸಾವಿರ ಕೋಟಿ ರೂ.ವೆಚ್ಚದಲ್ಲಿ ಕೊಠಡಿ, ಶೌಚಾಲಯ, ಪ್ರಯೋಗಾಲಯ ಇನ್ನಿತರ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ಅದೇರೀತಿ 4 ಸಾವಿರಕ್ಕೂ ಹೆಚ್ಚು ಕಿ.ಮೀ.ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸರಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಸರಕಾರವನ್ನು ಲಘುವಾಗಿ ಪರಿಗಣಿಸಬೇಡಿ: ಜಿಲ್ಲಾಧಿಕಾರಿ, ಸಿಇಓ ಯಾರೇ ಆಗಲಿ ಮೈತ್ರಿ ಸರಕಾರವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದೇ ಸರಕಾರದ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.

ರಾಜ್ಯ ಸರಕಾರದಲ್ಲಿ ಹಣದ ಕೊರತೆ ಇಲ್ಲ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕನಿಷ್ಠ 5 ಕೋಟಿ ರೂ. ಹಾಕಲಾಗಿದೆ. ಜಿಲ್ಲಾಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಜಿ.ಪಂ. ಸಿಇಓಗಳು ಹೋಬಳಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಿಂಗಳಿಗೆ ಒಮ್ಮೆ ಗ್ರಾಮ ವಾಸ್ತವ್ಯ ಮಾಡಿದರೆ ಆ ಜನರ ಸಮಸ್ಯೆ ನಿಮ್ಮ ಗಮನಕ್ಕೆ ಬರಲಿವೆ. ಜಿಲ್ಲಾಧಿಕಾರಿಗಳ ಹಂತದಲ್ಲೇ ಸಮಸ್ಯೆ ನೀಗಿಸಿದರೆ ಜನರು ಸಚಿವರವರೆಗೂ ಬರುವ ಸಮಸ್ಯೆ ತಪ್ಪಲಿದೆ ಎಂದು ಹೇಳಿದರು. ನನ್ನ ಬಳಿಯೇ ಸಾಕಷ್ಟು ಜನರು ಬಂದು ಸಮಸ್ಯೆ ತೋಡಿಕೊಳ್ಳುತ್ತಾರೆ. ಅವರು ನಮ್ಮ ಬಳಿ ಬರುತ್ತಿದ್ದಾರೆಂದರೆ ನೀವು ಕೆಲಸ ಮಾಡುತ್ತಿಲ್ಲ ಎಂದರ್ಥ ಅಲ್ಲವೇ ಎಂದು ಕುಟುಕಿದ ಅವರು, ಸಣ್ಣ ಕೆಲಸಕ್ಕೂ ಜನ ವರ್ಷಾನುಗಟ್ಟಲೆ ಕಾಯುವಂಥ ಸ್ಥಿತಿ ಇದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆದು ಸಂಪೂರ್ಣ ವ್ಯವಸ್ಥೆ ಪಡೆದುಕೊಳ್ಳಲು ಮೂರ್ನಾಲ್ಕು ವರ್ಷ ತೆಗೆದುಕೊಳ್ಳುತ್ತದೆ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಜಿಲ್ಲಾಸ್ಪತ್ರೆಗಳ ವೈದ್ಯರು, ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ರಾಜ್ಯ ಸರಕಾರಕ್ಕೆ ಪತ್ರ ಬರೆದು ಸಮಸ್ಯೆ ನೀಗಿಸಿ. ಹಳ್ಳಿಗಳಲ್ಲಿಯೂ ಡ್ರಗ್ಸ್ ವ್ಯಾಪಿಸಿದೆ ಎಂದರೆ, ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಎಚ್ಚರಿಕೆ ವಹಿಸಿಲ್ಲವೇ? ಜಿಲ್ಲೆಗಳಲ್ಲಿ ಡ್ರಗ್ಸ್ ಸಂಬಂಧ ಜಾಗೃತಿ ಮೂಡಿಸಬೇಕು. ಆದರೆ, ಈ ಕೆಲಸ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ತಮ್ಮ ಕೆಲಸ ನಿಭಾಯಿಸಿದರೆ ಎಲ್ಲ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ. ಈ ಬಗ್ಗೆ ಆಸಕ್ತಿ ವಹಿಸಿ ಎಂದರು.

ಉತ್ತರ ಕರ್ನಾಟಕ ಭಾಗವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಿಲ್ಲ. ಸಿಎಂ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೈ.ಕ.ಅಭಿವೃದ್ಧಿಗೆ ಕೇಂದ್ರ ಸರಕಾರ 371‘ಜೆ’ ವಿಶೇಷ ಸವಲತ್ತು ನೀಡಲಾಗಿದೆ. ಅಲ್ಲದೆ, ರಾಜ್ಯ ಸರಕಾರದಿಂದ 19ಸಾವಿರ ಕೋಟಿ ರೂ.ಗಳನ್ನು ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ನೀಡಲಾಗಿದೆ. ಕರ್ನಾಟಕ ಒಂದೇ ಎಂದು ಪ್ರತಿಪಾದಿಸಿದರು.

‘ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ಯಾರೇ ಆಗಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದೆ ಸರಕಾರದ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು’
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News