ನೇಪತ್ಯಕ್ಕೆ ಸರಿಯುತ್ತಿರುವ ದೇಶದ ಪ್ರಮುಖ ವಿಚಾರಗಳು: ಎಸ್‌ಡಿಪಿಐ ರಾಷ್ಟ್ರೀಯಾಧ್ಯಕ್ಷ ಎಂ.ಕೆ.ಫೈಝಿ

Update: 2018-07-30 13:49 GMT

ಬೆಂಗಳೂರು, ಜು.30: ದೇಶದಲ್ಲಿ ಒಂದು ಕಡೆ ದ್ವೇಷ ಹಾಗೂ ಮತ್ತೊಂದೆಡೆ ಮೋಸದ ರಾಜಕಾರಣ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದೇಶವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ಪ್ರಮುಖ ವಿಚಾರಗಳನ್ನು ಚರ್ಚೆಗೊಳಪಡದೆ ನೇಪತ್ಯಕ್ಕೆ ಸರಿಸಲಾಗುತ್ತಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ತಿಳಿಸಿದರು.

ಸೋಮವಾರ ‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಬಲಾತ್ಕಾರ, ಅತ್ಯಾಚಾರಗಳು ಎಗ್ಗಿಲ್ಲದೆ ನಡೆಯುತ್ತಿವೆ. ಪ್ರಧಾನಿ ಸಂಸತ್ತಿನಲ್ಲಿ ಗುಂಪು ಹಲ್ಲೆಗಳ ಕುರಿತು ಮಾತನಾಡಿದ ಮರು ದಿನವೇ ಬಿಜೆಪಿ ಆಡಳಿತವಿರುವ ರಾಜಸ್ಥಾನ, ಹರಿಯಾಣದಲ್ಲಿ ಈ ಘಟನೆಗಳು ಮರುಕಳಿಸುತ್ತವೆ ಎಂದರು.

ಜನ ಯಾವುದೇ ಭಯಭೀತಿಯಿಲ್ಲದೆ ಕಾನೂನು ಕೈಗೆತ್ತಿಕೊಳ್ಳುತ್ತಿರುವುದು ನೋಡಿದರೆ ಬಹುತೇಕ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಗುಂಪು ಹಲ್ಲೆಗಳನ್ನು ನಡೆಸುವವರಿಗೆ ಸರಕಾರ ಹಾಗೂ ಕೆಲವು ಸಂಘಟನೆಗಳಿಂದ ಪ್ರೋತ್ಸಾಹ ಸಿಗುತ್ತಿದೆ ಎನ್ನಲಾಗುತ್ತಿದೆ ಎಂದು ಅವರು ದೂರಿದರು.

ಜಾರ್ಖಂಡ್‌ನಲ್ಲಿ ಇಂತಹ ಘಟನೆಗೆ ಕಾರಣವಾದ ವ್ಯಕ್ತಿಗಳನ್ನು ಕೇಂದ್ರ ಸಚಿವ ಜಯಂತ್ ಸಿನ್ಹಾ ಸ್ವಾಗತ ಕೋರುತ್ತಾರೆ. ಆರೆಸೆಸ್ಸ್ ಮುಖಂಡ ಇಂದ್ರೇಶ್‌ ಕುಮಾರ್ ಎಂಬವರು ಗೋಹತ್ಯೆ ನಿಲ್ಲದಿದ್ದರೆ ಗುಂಪು ಹಲ್ಲೆಗಳು ನಿಲ್ಲುವುದಿಲ್ಲ ಎನ್ನುತ್ತಾರೆ. ಇಂತಹ ಹೇಳಿಕೆಗಳೆ ದುಷ್ಕರ್ಮಿಗಳಿಗೆ ಪ್ರೋತ್ಸಾಹ ನೀಡುತ್ತವೆ ಎಂದು ಫೈಝಿ ಆರೋಪಿಸಿದರು. ಜನಸಾಮಾನ್ಯರು ಈ ಕೋಮುಗಲಭೆ, ಘರ್ಷಣೆಗಳು ಹೊರತುಪಡಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ನೋಟುಗಳ ಅಮಾನ್ಯೀಕರಣ, ಜಿಎಸ್‌ಟಿ ಅನುಷ್ಠಾನ, ರೈತರ ಆತ್ಮಹತ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಯಾವ ಸಮಸ್ಯೆಗಳ ಪರಿಹಾರಕ್ಕೂ ಜಾತ್ಯತೀತ ಪಕ್ಷಗಳು ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಒಬ್ಬ ಪ್ರಧಾನಿ ಅಥವಾ ಒಂದು ಪಕ್ಷದ ಸರಕಾರವನ್ನು ಬದಲಾಯಿಸಿದ ಕೂಡಲೆ ‘ಫ್ಯಾಶಿಸಂ’ ನಾಶವಾಗುವುದಿಲ್ಲ. ಅಥವಾ ಜಾತ್ಯತೀತ ವ್ಯಕ್ತಿ ಪ್ರಧಾನಿಯಾದರೂ ಈ ವ್ಯವಸ್ಥೆ ಬದಲಾಗುವುದಿಲ್ಲ. ಕಳೆದ 50 ವರ್ಷಗಳ ಕಾಲ ಜಾತ್ಯತೀತ ಎಂದು ಬಿಂಬಿಸಿಕೊಂಡವರೆ ಅಧಿಕಾರ ನಡೆಸಿದ್ದಲ್ಲವೆ? ಫ್ಯಾಶಿಸಂನ ಕರಾಳ ಮುಖದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಫೈಝಿ ಹೇಳಿದರು.

ಜಾತ್ಯತೀತ ಪಕ್ಷಗಳನ್ನು ಹೇಗೆ ನಂಬಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಬಿಹಾರದಲ್ಲಿ ನಿತೀಶ್‌ ಕುಮಾರ್ ಬಿಜೆಪಿ ಸಖ್ಯ ತೊರೆದು ಮಹಾಘಟಬಂದನ್ ಮೂಲಕ ಅಧಿಕಾರಕ್ಕೆ ಬಂದರು. ಅಲ್ಲದೆ, ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟರು. ಆದರೆ, ಕೆಲವೇ ತಿಂಗಳಲ್ಲಿ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಿದರು. ಅದೇ ರೀತಿ ರಾಮ್‌ವಿಲಾಸ್ ಪಾಸ್ವಾನ್ ಅಧಿಕಾರಕ್ಕಾಗಿ ಎನ್‌ಡಿಎ, ಯುಪಿಎ ಹೀಗೆ ಯಾರ ಜೊತೆಯಾದರೂ ಕೈ ಜೋಡಿಸುತ್ತಾರೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಎಸ್‌ಡಿಪಿಐ, ಪಿಎಫ್‌ಐ, ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ ಎಂದು ಕೇಳಿ ಬರುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಫೈಝಿ, ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಲು ಇಂತಹ ಆರೋಪಗಳನ್ನು ಮಾಡಿದರು. ಕಾಂಗ್ರೆಸ್ ತನ್ನ ವೈಫಲ್ಯದಿಂದ ಸೋತಿದೆ. ತಳಮಟ್ಟದಲ್ಲಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.

ಬಿಜೆಪಿಯ ಭಯ ತೋರಿಸಿ ಮತಗಳನ್ನು ಸೆಳೆಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತದೆ. ಆದರೆ, ಜನರ ನೈಜ್ಯ ಸಮಸ್ಯೆಗಳು, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಇದು ಕೇವಲ ರಾಜ್ಯಕ್ಕಷ್ಟೇ ಸೀಮಿತವಲ್ಲ, ರಾಷ್ಟ್ರೀಯ ಮಟ್ಟದಲ್ಲಿಯೂ ಕಾಂಗ್ರೆಸ್ ಇದೇ ಕಾರಣಕ್ಕೆ ವೈಫಲ್ಯ ಎದುರಿಸುತ್ತಿದೆ ಎಂದು ಅವರು ಹೇಳಿದರು.

ಅಧಿಕಾರಕ್ಕೆ ಬಂದಲ್ಲಿ ಪಿಎಫ್‌ಐ, ಎಸ್‌ಡಿಪಿಐ ನಿಷೇಧಿಸುವುದಾಗಿ ಬೊಬ್ಬೆ ಹಾಕುವ ಬಿಜೆಪಿಯವರು, ಈಗಾಗಲೆ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾಕೆ ಈ ಬಗ್ಗೆ ಚಕಾರವೆತ್ತುವುದಿಲ್ಲ. ಎಸ್‌ಡಿಪಿಐ ಪಕ್ಷವನ್ನು ಒಂದು ಭಯೋತ್ಪಾದಕರ ಪಕ್ಷದಂತೆ ಬಿಂಬಿಸಿ ಜನರನ್ನು ದಿಕ್ಕು ತಪ್ಪಿಸುವುದು, ನಂತರ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ ಎಂದು ಅಪಪ್ರಚಾರ ನಡೆಸುವುದು. ಆ ಮೂಲಕ ಹಿಂದೂಗಳ ಮತಗಳನ್ನು ಕ್ರೋಡೀಕರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.

ನಾವು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಪ್ರಸ್ತಾಪ ಮಾಡುವ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರಿಂದ ಸಾಧ್ಯವಾಗುವುದಿಲ್ಲ. ದೇಶದಲ್ಲಿ ತಳಮಟ್ಟದಿಂದ ನಾವು ಜನರಿಗಾಗಿ ದುಡಿಯುತ್ತಿದ್ದೇವೆ. ನಾವು ಯಾವುದೇ ಧರ್ಮ, ಸಮುದಾಯದ ವಿರುದ್ಧ ಕೆಲಸ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ಉತ್ತಮವಾಗಿದೆ. ನಮ್ಮ ವಿಚಾರಧಾರೆಯನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹೊಸ ತಂಡವನ್ನು ರಚನೆ ಮಾಡಿದ್ದು, ಪಕ್ಷ ಸಂಘಟನೆಗಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಫೈಝಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News