ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ಪ್ಲಾನ್: ಸತೀಶ್ ಜಾರಕಿಹೊಳಿ

Update: 2018-07-31 13:19 GMT

ಬೆಂಗಳೂರು, ಜು.31: ಮುಂದಿನ ಐದು ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡುತ್ತೇವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಅಭಿವೃದ್ಧಿಗೋಸ್ಕರ, ನಾವು ಕೂಡಾ ಅದರಲ್ಲಿ ಭಾಗಿಯಾಗುತ್ತೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪ್ರತ್ಯೇಕತೆಯ ಬಗ್ಗೆ ಪ್ರತಿಭಟನೆ ನಡೆಯುತ್ತಿಲ್ಲ. ಪ್ರತಿ ದಿನದ ಹೇಳಿಕೆಯನ್ನು ಡ್ಯಾಮೇಜ್ ಅಂತಾ ಹೇಳಲು ಸಾಧ್ಯವಿಲ್ಲ. ಲಿಂಗಾಯತ ವಿಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಿರುವುದು ನಿಜ. ಆದರೆ, ಈ ವಿಚಾರವೇ ಬೇರೆ ಇದೆ. ಇದರಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ ಎಂದರು.

ಉತ್ತರ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಹಾನಿಕಾರಕವಾಗುವಂತಹ ಹೇಳಿಕೆ’ ನೀಡಿದ್ದರೆ ಖಂಡಿತವಾಗಿಯೂ ಅದನ್ನು ಹಿಂಪಡೆಯಲೇ ಬೇಕಾಗುತ್ತದೆ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಗುರಿ. ಕುಮಾರಸ್ವಾಮಿ ಹೆಚ್ಚುವರಿ ಬಜೆಟ್ ಮಂಡಿಸಿರುವುದರಿಂದ ಆ ಬಗ್ಗೆ ನಾನು ಮಾತನಾಡುವುದಿಲ್ಲ. ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ನಮ್ಮ ಭಾಗಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದರು ಎಂದು ಹೇಳಿದರು.

ಕುಮಾರಸ್ವಾಮಿ ಕೇವಲ ರಾಮನಗರ, ಚನ್ನಪಟ್ಟಣದ ಮುಖ್ಯಮಂತ್ರಿ ಅಲ್ಲ. ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ಆದರೆ, ಯಾವ ಕಾರಣಕ್ಕಾಗಿ ಅವರು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಮ್ಮ ಸಹಮತವಿಲ್ಲ. ನಮ್ಮ ಭಾಗವು ಮೈಸೂರು, ಮಂಗಳೂರು, ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು ಎಂಬ ಆಸೆ ಇದೆ. ಕುಮಾರಸ್ವಾಮಿ ಎಲ್ಲರ ಪರವಾಗಿ ಇರುತ್ತಾರೆ ಅಂತ ನಮ್ಮ ಭಾವನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ಉತ್ತರ ಕರ್ನಾಟಕ ಭಾಗದಿಂದಲೆ ಹೆಚ್ಚಿನ ಶಾಸಕರು ಆಯ್ಕೆಯಾಗುತ್ತಾರೆ. ಆದರೆ, ಸಚಿವ ಸಂಪುಟದಲ್ಲಿ ಆ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಮಕೃಷ್ಣ ಹೆಗಡೆ ಕಾಲದಿಂದಲೂ ಇದೇ ಪ್ರವೃತ್ತಿ ಮುಂದುವರೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ನೀಡಿರುವ ಹೇಳಿಕೆಯೂ ಲೋಕಸಭಾ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಬಿಜೆಪಿಯವರು ಇದನ್ನು ಅಸ್ತ್ರವನ್ನಾಗಿ ಬಳಸಲು ಹೋಗುವುದಿಲ್ಲ. ಒಂದು ವೇಳೆ ಅಂತಹ ಸಾಹಸಕ್ಕೆ ಕೈ ಹಾಕಿದರೆ ಅವರ ಪಾಲಿಗೆ ಇದು ಮಾರಕವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದರು. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಅಷ್ಟರಲ್ಲಿ ಈ ಹಾನಿಯನ್ನು ಸರಿಪಡಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಮಗ್ರ ಕರ್ನಾಟದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಭಾಗಕ್ಕೆ ಆಗಿರುವಷ್ಟು ಅಭಿವೃದ್ಧಿ ಉತ್ತರ ಕರ್ನಾಟಕಕ್ಕೆ ಆಗಿಲ್ಲ. ಅಭಿವೃದ್ಧಿ ಆಗೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ಅಖಂಡ ಕರ್ನಾಟಕಕ್ಕೆ ಒಗ್ಗೂಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಬಿಜೆಪಿಯವರ ತಂತ್ರ ಫಲಿಸುವುದಿಲ್ಲ. ರೈತರ ಸಮಗ್ರ ಸಾಲಮನ್ನಾ ಮಾಡುವಂತೆ ಬಿಜೆಪಿಯವರು ಪಾದಯಾತ್ರೆ ಮಾಡಿದರು. ಇವರ ಯೋಗ್ಯತೆಗೆ ಕೇಂದ್ರದಿಂದ ಸಾಲಮನ್ನಾ ಮಾಡಿಸಲು ಆಗಿಲ್ಲ. ಕುಮಾರಸ್ವಾಮಿಯವರ ಜನಪ್ರಿಯ ಕಾರ್ಯಕ್ರಮಗಳು ದೀರ್ಘಕಾಲ ಉಳಿಯುತ್ತವೆ. 15 ದಿನದಲ್ಲಿ ಸರಕಾರ ಪತನ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಅಷ್ಟು ದಿನ ಕಾದು ನೋಡೋಣ ಏನಾಗುತ್ತದೆ.

-ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News