×
Ad

ವಿಶೇಷ ಭತ್ತೆ ವೇತನದಲ್ಲಿ ವಿಲೀನಗೊಳಿಸಲು ಆಗ್ರಹ

Update: 2018-07-31 19:01 IST

ಬೆಂಗಳೂರು, ಜು.31: ಭಡ್ತಿ ಹೊಂದಿರುವ ಶಿಕ್ಷಕರಿಗೆ ವಿಶೇಷ ಭತ್ತೆ 400 ರೂ.ಗಳನ್ನು ವೇತನದಲ್ಲಿ ವಿಲೀನಗೊಳಿಸಿ, ವೇತನ ನಿಗದಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2008 ರ ಆಗಸ್ಟ್ ನಂತರ 6,800 ವೇತನ ನಿಗದಿ ಪಡಿಸಿದ್ದು, ವೇತನ ಶ್ರೇಣಿ 6,800 ರಿಂದ 13 ಸಾವಿರದವರೆಗೆ ನಿಗದಿ ಮಾಡಲಾಗಿದೆ. ಆದರೆ, ಪ್ರಾಥಮಿಕ ಶಾಲೆಗೆ ನೇರ ನೇಮಕಾತಿ ಹೊಂದಿದ ಶಿಕ್ಷಕರಿಗೆ ವಿಶೇಷ ಭತ್ತೆ ಪಡೆಯಲು ಅರ್ಹರಲ್ಲವೆಂದು ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದರು.

ಪ್ರೌಢಶಾಲಾ ಶಿಕ್ಷಕರಾಗಿ ಭಡ್ತಿ ಹೊಂದುವ ಮೊದಲೇ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾಗಿದ್ದೇವೆ. ಸರಕಾರಿ ಆದೇಶ ಅನ್ವಯ 200 ರೂ.ಗಳು ವಿಶೇಷ ಭತ್ತೆಯನ್ನು ಪಡೆಯುತ್ತಿದ್ದೆವು. ನಂತರ 5 ನೆ ವೇತನ ಆಯೋಗದ ಪರಿಷ್ಕರಣೆಯಲ್ಲಿ 200 ರೂ.ಗಳಿಂದ 400 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದರಂತೆ, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ನಿಯಮಾವಳಿಯಂತೆ ಭಡ್ತಿ ಹೊಂದಿದ್ದು, ನಾವು ವಿಶೇಷ ಭತ್ತೆ ಪಡೆಯಲು ಅರ್ಹರಿದ್ದೇವೆ. ಆದರೆ, ಸರಕಾರ ವಿಶೇಷ ಭತ್ತೆಯನ್ನು ತಡೆ ಹಿಡಿದಿದ್ದು, ಭಡ್ತಿ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

ಆರನೇ ವೇತನ ಆಯೋಗದ ಅನ್ವಯ ವೇತನ ನಿಗದಿ ಮಾಡುವ ಸಂದರ್ಭದಲ್ಲಿ 400 ರೂ.ಗಳ ವಿಶೇಷ ಭತ್ತೆ ಬಿಟ್ಟು, ಮೂಲ ವೇತನ ನಿಗದಿ ಮಾಡಿದ್ದಾರೆ. ಇದರಿಂದ ಶಿಕ್ಷಕರಿಗೆ ದೊರಯಬೇಕಾದ ಸೌಲಭ್ಯ ಸಿಗುತ್ತಿಲ್ಲ. ಆದುದರಿಂದಾಗಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ 6 ನೆ ವೇತನ ಆಯೋಗಕ್ಕೆ ವಿಶೇಷ ಭತ್ತೆ ವಿಲೀನ ಮಾಡಿ ವೇತನ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಗಜೇಂದ್ರಗೌಡ, ಕೆ.ಎಂ.ವೆಂಕಟೇಶ್, ಶಶಿಧರ್, ಮುನಿಯಪ್ಪ, ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News